ಜೋಧಪುರ (ರಾಜಸ್ಥಾನ):ರಾಬರ್ಟ್ ವಾದ್ರಾ ಮತ್ತು ಅವರ ತಾಯಿ ಮೌರೀನ್ ವಾದ್ರಾ ನಡುವಿನ ಪಾಲುದಾರಿಕೆಯ ಸ್ಕೈ ಲೈಟ್ ಹಾಸ್ಪಿಟಾಲಿಟಿ ಎಲ್‌ಎಲ್‌ಪಿ ಕಂಪನಿಯ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ತಾಯಿ ಮಗ ಇಬ್ಬರಿಗೂ ಸಂಕಷ್ಟ ಎದುರಾಗಿದ್ದು, ಇಬ್ಬರಿಗೂ ಬಂಧನ ಭೀತಿ ಆವರಿಸಿದೆ.
ಆದಾಗ್ಯೂ ಕೋರ್ಟ್ ತನ್ನ ತೀರ್ಪಿನಲ್ಲಿ ವಾದ್ರಾಗೆ ಸ್ವಲ್ಪ ರಿಲೀಫ್ ನೀಡಿದ್ದು, ಜಾರಿ ನಿರ್ದೇಶನಾಲಯ ಸದ್ಯಕ್ಕೆ 15 ದಿನಗಳ ಕಾಲ ಅವರನ್ನು ಬಂಧಿಸದಂತೆ ಆದೇಶ ನೀಡಿದೆ. ಈ ಸಮಯದಲ್ಲಿ ವಾದ್ರಾ ಬಯಸಿದರೆ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಐದು ವರ್ಷಗಳಿಂದ ರಾಜಸ್ಥಾನ ಹೈಕೋರ್ಟ್ ನಲ್ಲಿ ಬಾಕಿ ಉಳಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಾ.ಪುಷ್ಪೇಂದ್ರ ಸಿಂಗ್ ಭಾಟಿ ಅವರ ಏಕ ಸದಸ್ಯ ಪೀಠ ಇಂದು ತೀರ್ಪು ನೀಡಿದೆ. ಸ್ಕೈ ಲೈಟ್ ಹಾಸ್ಪಿಟಾಲಿಟಿ ಹೊರತಾಗಿ ಮಹೇಶ್ ನಾಗರ್ ಪರವಾಗಿ ಜಾರಿ ನಿರ್ದೇಶನಾಲಯದ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದ ತೀರ್ಪಿನ ನಂತರ, ಜಾರಿ ನಿರ್ದೇಶನಾಲಯವು ಈಗ ತನ್ನ ತನಿಖೆಯನ್ನು ಮುಂದುವರಿಸಬಹುದು. ಆದರೆ ವಾದ್ರಾ ಅವರನ್ನು ಬಂಧಿಸಕೂಡದು ಎಂದು 15 ದಿನಗಳ ಕಾಲ ನ್ಯಾಯಾಲಯ ರಕ್ಷಣೆ ನೀಡಿದೆ.
ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜದೀಪ್ ರಸ್ತೋಗಿ ಮತ್ತು ಅವರ ಸಹವರ್ತಿ ಹಿರಿಯ ವಕೀಲ ಭಾನುಪ್ರಕಾಶ್ ಬೋಹ್ರಾ ವಾದ ಮಂಡಿಸಿದರು. ವಾದ್ರಾ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕೆಟಿಎಸ್ ತುಳಸಿ ವಾದ ಮಂಡಿಸಿದ್ದರು. ಮೂರು ದಿನಗಳ ಸುದೀರ್ಘ ಚರ್ಚೆಯ ನಂತರ, ಬುಧವಾರ ತೀರ್ಪು ಕಾಯ್ದಿರಿಸಿದ ನ್ಯಾಯಾಲಯವು ಗುರುವಾರ ತೀರ್ಪು ನೀಡುವಾಗ ವಾದ್ರಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಸ್ಕೈ ಲೈಟ್ ಹಾಸ್ಪಿಟಾಲಿಟಿ ಎಲ್‌ಎಲ್‌ಪಿ ಕಂಪನಿಯ ಪಾಲುದಾರರ ವಿರುದ್ಧ ಬಿಕಾನೇರ್‌ನ ಕೊಲಾಯತ್‌ನಲ್ಲಿ 275 ಬಿಘಾ ಭೂಮಿಯ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಪುರಾವೆಗಳನ್ನು ಸಂಗ್ರಹಿಸಲು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 2 ರ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ, 2019 ರ ಜನವರಿ 21 ರಂದು ಹೈಕೋರ್ಟ್, ತಾಯಿ ಮತ್ತು ಮಗ ಇಬ್ಬರೂ ತನಿಖೆಗಾಗಿ 12 ಫೆಬ್ರವರಿ 2019 ರಂದು ಇಡಿ ಮುಂದೆ ಖುದ್ದಾಗಿ ಹಾಜರಾಗಬೇಕು ಎಂದು ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಜೈಪುರ ಇಡಿ ಕಚೇರಿಯಲ್ಲಿ ರಾಬರ್ಟ್ ವಾದ್ರಾ ಮತ್ತು ಅವರ ತಾಯಿ ಮೌರೀನ್ ವಾದ್ರಾ ಖುದ್ದು ಹಾಜರಾಗಿದ್ದರು. ಇಡಿ ಕೂಡ ವಿಚಾರಣೆ ನಡೆಸಿತ್ತು, ಆದರೆ ನಂತರ ಇಡಿ ಕಸ್ಟಡಿ ವಿಚಾರಣೆಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ, ಈ ಹಿಂದೆ ಡಿಸೆಂಬರ್ 19, 2018 ರಂದು ವಿಧಿಸಿದ್ದ ಬಂಧನದಿಂದ ರಕ್ಷಣೆಯನ್ನು 15 ದಿನಗಳವರೆಗೆ ವಿಸ್ತರಿಸುವ ಮೂಲಕ ನ್ಯಾಯಾಲಯ ವಾದ್ರಾಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.