ರಾಯಗಢ: ಕುಂಭದ್ರೋಣ ಮಳೆಗೆ ಮಹಾರಾಷ್ಟ್ರದ ಹಲವು ಭಾಗಗಳು ನಲುಗಿ ಹೋಗಿವೆ. ನಿರಂತರ ಮಳೆಯಿಂದಾಗಿ ಹಲವೆಡೆ ಪ್ರವಾಹ ಉಂಟಾಗಿದ್ದು, ಕೆಲವೆಡೆ ಭೂ ಕುಸಿತ ಉಂಟಾಗಿದೆ. ರಾಯಗಢ ಜಿಲ್ಲೆಯ ಮಹಡ್ ತಾಲೂಕಿನ ಕಲೈ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, 15 ಜನರನ್ನು ರಕ್ಷಣೆ ಮಾಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
32 ಮಂದಿ ಮೃತದೇಹ ಹೊರಕ್ಕೆ
"ಭೂಕುಸಿತದಿಂದಾಗಿ ಜಿಲ್ಲೆಯಲ್ಲಿ ಒಟ್ಟು 36 ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ 32 ಮಂದಿ ತಲೈನಲ್ಲಿ ಮತ್ತು 4 ಮಂದಿ ಸಖರ್ ಸುತಾರ್ ವಾಡಿಯಲ್ಲಿ ಸಾವನ್ನಪ್ಪಿದ್ದಾರೆ" ಎಂದು ರಾಯಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದ್ದಾರೆ. ಧಾರಾಕಾರ ಮಳೆ ಮತ್ತು ಪ್ರವಾಹವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಬಳಿಕ ಕಾರ್ಯಾಚರಣೆ ಮುಂದುವರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ನಂತರ ಜಿಲ್ಲೆಯ ವಿವಿಧ ಪರಿಹಾರ ಕಾರ್ಯಾಚರಣೆಗಳಿಂದ ಈವರೆಗೆ 1,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಅವಶೇಷಗಳ ಒಳಗೆ 30 ಜನರು ಸಿಕ್ಕಿಬೀಳುತ್ತಾರೆ ಎಂಬ ಆತಂಕವೂ ಇದೆ ಎಂದು ತಿಳಿಸಿದ್ದಾರೆ. ರಾಯಗಢದಲ್ಲಿ ನಾಲ್ಕು ಭೂಕುಸಿತ ಘಟನೆಗಳು ವರದಿಯಾಗಿವೆ.
ನದಿಯ ನೀರಿನ ಮಟ್ಟ ಏರಿಕೆ:
ಕೊಲ್ಹಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ರಾಜಾರಾಮ್ ವೇರ್‌ನಲ್ಲಿ ಪಂಚಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ರಾಜರಾಮ್ವೇರ್ನಲ್ಲಿ ನದಿಯ ನೀರಿನ ಮಟ್ಟ 41.2 ಅಡಿಯಷ್ಟಿದೆ. ಇದು 43 ಅಡಿಗಳ ಅಪಾಯದ ಮಟ್ಟಕ್ಕಿಂತ ಕೇವಲ 1.8 ಅಡಿ ಮಾತ್ರ ಕಡಿಮೆಯಿದೆ.
ಸೇನೆಯ ನೆರವು ಕೋರಿದ ಸಚಿವೆ:
ಏತನ್ಮಧ್ಯೆ, ಮಹಡ್ನಲ್ಲಿ ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರ ಮತ್ತು ಸೇನೆಯ ನೆರವು ಕೋರಿದೆ ಎಂದು ರಾಯಗಢ ಉಸ್ತುವಾರಿ ಸಚಿವೆ ಅದಿತಿ ಎಸ್. ತತ್ಕರೆ ಮಾಹಿತಿ ನೀಡಿದರು.