ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಮೊದಲ ಬಾರಿಗೆ ಇಂದು ಮಧ್ಯಾಹ್ನ 1 ಗಂಟೆಗೆ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಲಿದ್ದಾರೆ. 2019 ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸೂರತ್ ಕೋರ್ಟ್‌ನಿಂದ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಾಹುಲ್ ಕೇರಳದ ವಯನಾಡ್ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರು. ಇದೀಗ, 2 ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿರುವ ಕಾರಣ ನಿಯಮದಂತೆ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನ (ಮಾರ್ಚ್ 24 ರಂದು) ಅನರ್ಹಗೊಳಿಸಿ ಆದೇಶಿಸಲಾಗಿದೆ. ರಾಹುಲ್ ಎಂಪಿ ಸ್ಥಾನಮಾನವನ್ನು ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ. ಏಕೆಂದರೆ, ಅವರು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು.
ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ ನಂತರ ಮೊದಲ ಬಾರಿಗೆ ಗುರುವಾರ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ರಾಗಾ, "ಭಾರತದ ಧ್ವನಿಗಾಗಿ ನಾನು ಹೋರಾಡುತ್ತಿದ್ದೇನೆ. ಇದಕ್ಕಾಗಿ "ಯಾವುದೇ ಬೆಲೆ ತೆರಲು" ಸಿದ್ಧ ಎಂದಿದ್ದರು.
ಚುನಾವಣೆ ಘೋಷಣೆ ಸಾಧ್ಯತೆ:ರಾಹುಲ್ ಅನರ್ಹಗೊಂಡ ಪರಿಣಾಮ ವಯನಾಡ್ ಎಂಪಿ ಸ್ಥಾನ ಖಾಲಿಯಾಗಿದೆ. ಹೀಗಾಗಿ,, ಚುನಾವಣಾ ಆಯೋಗವು ವಯನಾಡ್‌ಗೆ ಹೊಸದಾಗಿ ಉಪ ಚುನಾವಣೆ ಘೋಷಣೆ ಮಾಡಬಹುದು. ಅಲ್ಲದೇ, ಅನರ್ಹತೆಯ ತೀರ್ಪನ್ನು ಉನ್ನತ ನ್ಯಾಯಾಲಯವು ವಜಾ ಮಾಡದಿದ್ದರೆ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಭಾರತದ ರಾಜಕೀಯದಲ್ಲಿ ತನ್ನ ನೆಲೆ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಈ ವಿಚಾರ ಮತ್ತಷ್ಟು ಆಘಾತ ನೀಡಿದೆ.