ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ನೇಹಿತರೊಬ್ಬರ ಆಹ್ವಾನದ ಮೇರೆಗೆ ವಿವಾಹದಲ್ಲಿ ಪಾಲ್ಗೊಳ್ಳಲು ನೇಪಾಳಕ್ಕೆ ತೆರಳಿದ್ದಾರೆ ಎಂದು ಮೂಲಗಳು ವರದಿ ಮಾಡಿದ್ದು, ಕಠ್ಮಂಡುವಿನ ನೈಟ್ಕ್ಲಬ್ನಲ್ಲಿ ಅವರು ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿ ಇನ್ನೂ ಮದುವೆ ಸಮಾರಂಭದಲ್ಲಿ ಭಾಗಿಯಾಗುವುದು ಅಪರಾಧವಾಗಿಲ್ಲ ಎಂದು ಹೇಳಿಕೆ ನೀಡಿದೆ.
ರಾಹುಲ್ ಗಾಂಧಿ ಅವರು ಪತ್ರಕರ್ತರಾಗಿರುವ ಸ್ನೇಹಿತನ ಖಾಸಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ನೇಪಾಳಕ್ಕೆ ಹೋಗಿದ್ದಾರೆ. ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುವುದು ಇನ್ನೂ ಅಪರಾಧವಾಗಿಲ್ಲ. ಬಹುಶಃ ಇಂದಿನಿಂದ ಮದುವೆಗೆ ಹಾಜರಾಗುವುದು ಕಾನೂನುಬಾಹಿರ ಮತ್ತು ಸ್ನೇಹಿತರನ್ನು ಹೊಂದುವುದು ಅಪರಾಧ ಎಂದು ಬಿಜೆಪಿ ನಿರ್ಧರಿಸಬಹುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ವ್ಯಂಗ್ಯವಾಡಿದ್ದಾರೆ.