ನವದೆಹಲಿ :I.N.D.I.A ಕೂಟ ಅಧಿಕಾರಕ್ಕೆ ಬಂದರೆ, ಜಾತಿಗಣತಿ ನಡೆಸಲಾಗುವುದು ಎಂದು ಭರವಸೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರ ಸರ್ಕಾರ ಇಂದು (ಅಕ್ಟೋಬರ್ 2) ಬಿಡುಗಡೆ ಮಾಡಿರುವ ಜಾತಿ ಗಣತಿಯನ್ನು ಸ್ವಾಗತಿಸಿದ್ದಾರೆ. ಅಲ್ಲದೇ, ವರ್ಗಗಳ ಜನಸಂಖ್ಯೆಯ ಆಧಾರದ ಮೇಲೆ ಜನರಿಗೆ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ.
ಬಿಹಾರದ ಜಾತಿ ಸಮೀಕ್ಷಾ ವರದಿ ಸಮಾಜದಲ್ಲಿ ಯಾವೆಲ್ಲಾ ವರ್ಗದ ಜನರು, ಎಷ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ಆಗ ಅವರಿಗೆ ಸಿಗಬೇಕಾದ ಮೀಸಲು, ಹಕ್ಕುಗಳು ಏನೆಂಬುದು ತಿಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿವಾರು ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಎಷ್ಟು ಮಹತ್ವ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬಿಹಾರದ ಜಾತಿ ಗಣತಿಯು ಹಿಂದುಳಿದ ವರ್ಗ + ಪರಿಶಿಷ್ಟ ಜಾತಿ + ಪರಿಶಿಷ್ಟ ಪಂಗಡದ ಜನಸಂಖ್ಯೆ ಸೇರಿ ರಾಜ್ಯದಲ್ಲಿ ಒಟ್ಟಾರೆ, 84 ಪ್ರತಿಶತದಷ್ಟಿದ್ದಾರೆ ಎಂದು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ ಮೂವರು ಮಾತ್ರ ಒಬಿಸಿಯವರಾಗಿದ್ದಾರೆ. ಅವರು ದೇಶದ ಬಜೆಟ್‌ನ ಶೇಕಡಾ 5 ರಷ್ಟನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ, ಭಾರತದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹೆಚ್ಚಿನ ಜನಸಂಖ್ಯೆಗೆ ಹೆಚ್ಚಿನ ಹಕ್ಕುಗಳು ಎಂಬುದು ನಮ್ಮ ಪ್ರತಿಜ್ಞೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ಸಿಎಂ ನಿತೀಶ್ಕುಮಾರ್ ಪ್ರಶಂಸೆ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿವಾರು ಗಣತಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಮೀಕ್ಷೆ ನಡೆಸಿದ ಇಡೀ ತಂಡವನ್ನು ಅಭಿನಂದಿಸಿದ್ದಾರೆ. ಸಮೀಕ್ಷೆಯು ಜಾತಿಗಳನ್ನು ಬಹಿರಂಗಪಡಿಸುವುದರ ಜೊತೆಗೆ, ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.