ನವದೆಹಲಿ:ಸನಾತನ ಧರ್ಮ ಕುರಿತು ವಿವಾದಿತ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ತಮಿಳುನಾಡು ಸರ್ಕಾರ ಅದೊಂದು 'ಪ್ರಚಾರ ಪ್ರಿಯ ಅರ್ಜಿಗಳು'(ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಶನ್) ಎಂದು ವಾದಿಸಿದೆ.
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಟೀಕಿಸಿ ಅವಮಾನ ಮಾಡಿದ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೋರಿ ದೆಹಲಿ ಮೂಲದ ವಕೀಲರೊಬ್ಬರು ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠದ ಮುಂದೆ ತಮಿಳುನಾಡು ಸರ್ಕಾರ ಪಿಐಎಲ್ಗಳು ಪ್ರಚಾರಕ್ಕಾಗಿ ಹಾಕಲಾಗುತ್ತಿರುವ ಅರ್ಜಿಗಳ ಸ್ವರೂಪದಲ್ಲಿವೆ ಎಂದು ಹೇಳಿದೆ.
ತಮಿಳುನಾಡು ಸರ್ಕಾರದ ಪರ ವಾದ ಮಂಡಿಸಿದ ವಕೀಲ ಅಮಿತ್ ಆನಂದ್ ತಿವಾರಿ, ಕೋರ್ಟ್ಗೆ ಸಲ್ಲಿಸಲಾಗುತ್ತಿರುವ ಸಾರ್ವಜನಿಕ ಹಿತಾಸಕ್ತಿ ದಾವೆಗಳ ಸ್ವರೂಪ ಬದಲಾಗಿದೆ. ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಶನ್ ಅರ್ಜಿಗಳು ಈಗ ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಶನ್ ಅರ್ಜಿಗಳಾಗಿವೆ. ಪಿಐಎಲ್ ಸಲ್ಲಿಸುವವರ ಸಮಾಜದಲ್ಲಿ ಪ್ರಚಾರಕ್ಕೆ ಬರಬೇಕು ಎಂಬ ಉದ್ದೇಶ ಹೊಂದಿರುತ್ತಾರೆ ಎಂದು ಹೇಳಿದರು.