ಬೆಂಗಳೂರು:ಅಗ್ನಿಪಥ್ ವಿರೋಧಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ರಾಜಭವನ ಚಲೋ ಪ್ರತಿಭಟನೆ ನಡೆಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಂತರ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ರೇಸ್ ಕೋರ್ಸ್ ರಸ್ತೆಯ ಬಳಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ರಾಹುಲ್ ಗಾಂಧಿ ಮೇಲೆ ಇಡಿ ದಾಳಿ ಹೇಗೆ ನಡೆಯಿತು? ಅಗ್ನಿಪಥ್ ಯೋಜನೆ ತರಲು ಇಡಿ ವಿಚಾರಣೆ ಬಿಟ್ಟರು. ಇವರು ಮುಗಿದು ಹೋದ ಕೇಸ್ ಓಪನ್ ಮಾಡಿದ್ದಾರೆ ಎಂದರು.
ಓಟಿ ರವಿಗೆ ಹೇಳ್ತೇನೆ. ಎರಡು ಬಾರಿ ಆಕ್ಸಿಡೆಂಟ್ ಮಾಡಿ ಓಡಿ ಹೋದವನು ನೀನು. ಮೂರು ಜೀವಗಳನ್ನ ಬಲಿಪಡೆದವನು. ನೀನು ಗಾಂಧಿ ಕುಟುಂಬದ ಬಗ್ಗೆ ಮಾತನಾಡ್ತೀಯ. ಜೀವ ತೆಗೆದವನಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ. ಗಾಂಧಿ ಪರಿವಾರದ ಬಗ್ಗೆ ಅಂಥ ಹೇಳಿಕೆ ಕೊಡಬೇಡಿ. ಕೊಟ್ಟರೆ ಅದಕ್ಕೆ ತಕ್ಕ ಉತ್ತರ ಯೂತ್ ಕಾಂಗ್ರೆಸ್ ಕೊಡುತ್ತದೆ. ನೀವು ಓಟಿ ರವಿ ಆಗೋದನ್ನ ಬಿಡಿ ಎಂದು ಶ್ರೀನಿವಾಸ್ ಕಿಡಿ ಕಾರಿದರು.
ದೇಶದ ಸೈನಿಕರು ಯಾರದೋ ಆಫೀಸಿನಲ್ಲಿ ಕೆಲಸ ಮಾಡುವ ದರ್ದು ಬಂದಿಲ್ಲ. ದೇಶಭಕ್ತರಾದರೆ ಅಗ್ನಿಪಥ್ ವಾಪಸ್ ಪಡೆಯಿರಿ. ದೇಶ ದ್ರೋಹಿಗಳಾದರೆ ಅಗ್ನಿಪಥ ಯೋಜನೆ ಮುಂದುವರಿಸಿ ಎಂದು ಸವಾಲು ಹಾಕಿದರು. ಬಳಿಕ ಮಾತನಾಡಿದ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ನಲಪಾಡ್, ಯುವಕರು ಸೈನಿಕನಾಗಬೇಕು ಎಂಬ ಕನಸು ಕಾಣ್ತಿದ್ದಾರೆ. ಸೇನೆಗೆ ಸೇರಲು ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದಾರೆ.
ಅವರ ಕನಸಿಗೆ ನೀವು ಹೊಡೆದಿರುವಿರಿ. ಅವರ ಆಸೆಯನ್ನು ನಾಲ್ಕು ವರ್ಷಕ್ಕೆ ಹತ್ತಿಕ್ಕಿರುವಿರಿ. ಐಐಎಂನಲ್ಲಿ ಓದಿದವರಿಗೆ ಕೆಲಸ ಇಲ್ಲ. ಕೋವಿಡ್ನಲ್ಲಿ ಕೋಟಿ ಜನ ಕೆಲಸ ಕಳೆದುಕೊಂಡರು. ಹಾಗಾಗಿ ಅಗ್ನಿಪಥ ವಾಪಸ್ ಪಡೆಯಬೇಕು. ವಾಪಸ್ ಪಡೆಯುವವರೆಗೆ ಹೋರಾಟ ನಡೆಯಲಿದೆ ಎಂದರು.
ಬಿ.ವಿ.ಶ್ರೀನಿವಾಸ್ ಪೊಲೀಸರಿಗೆ ಆವಾಜ್: ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಪೊಲೀಸರಿಗೆ ಆವಾಜ್ ಹಾಕಿದ ಪ್ರಸಂಗ ನಡೆಯಿತು. ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಬಟ್ಟೆ ಹರಿದಿದ್ದಾರೆ ಎಂದು ಗರಂ ಆದ ಶ್ರೀನಿವಾಸ್ ಪೊಲೀಸರೊಬ್ಬರ ವಿರುದ್ಧ ಹರಿಹಾಯ್ದರು. ನೀವೇನು ಬಿಜೆಪಿಯ ದಲ್ಲಾಳಿಯೇ ಎಂದು ಪ್ರಶ್ನಿಸಿದರು.