ನವದೆಹಲಿ: ದೇಶದಲ್ಲಿಯೇ ಅತೀ ಉದ್ದದ ಎಕ್ಸ್‌ಪ್ರೆಸ್ ಮಾರ್ಗ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು (Purvanchal Expressway) ಮಧ್ಯಾಹ್ನ 1.30ಕ್ಕೆ ಪ್ರಧಾನಿ ನರೆಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ.
ಸುಲ್ತಾನ್‌ಪುರ ಜಿಲ್ಲೆಯ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾದ 3.2 ಕಿಮೀ ಉದ್ದದ ಏರ್‌ಸ್ಟ್ರಿಪ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ವೈಮಾನಿಕ ಪ್ರದರ್ಶನಕ್ಕೂ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ತುರ್ತು ಸಂದರ್ಭಗಳಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲು ಅನುಕೂಲವಾಗುವಂತೆ ಪೂರ್ವಾಂಚಲ್ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿದೆ. ಈ ಹಿಂದೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಿಂದ ಆಗ್ರಾವರೆಗೂ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿತ್ತು. ಯಮುನಾ ಎಕ್ಸಪ್ರೆಸ್ ವೇನಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲಾಗಿತ್ತು. ರಾಜಸ್ಥಾನದ ಪಾಕ್ ಗಡಿಯಲ್ಲೂ ಇತ್ತೀಚೆಗೆ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲಾಗಿತ್ತು. ನಾಳೆ ಪೂರ್ವಾಂಚಲ ಎಕ್ಸಪ್ರೆಸ್ ವೇನಲ್ಲೂ ಅದೇ ರೀತಿ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲಾಗುತ್ತೆ.
341 ಕಿಲೋಮೀಟರ್ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಲಖನೌ-ಸುಲ್ತಾನ್‌ಪುರ ರಸ್ತೆಯಲ್ಲಿ (NH-731) ಲಖನೌ ಜಿಲ್ಲೆಯ ಚೌದ್ಸರೈ ಗ್ರಾಮದಿಂದ ಪ್ರಾರಂಭವಾಗುತ್ತದೆ. ಉತ್ತರ ಪ್ರದೇಶ-ಬಿಹಾರ ಗಡಿಯಿಂದ ಪೂರ್ವಕ್ಕೆ 18 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31 ರಲ್ಲಿರುವ ಹೈದರಿಯಾ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
ಎಕ್ಸ್‌ಪ್ರೆಸ್‌ವೇ 6-ಲೇನ್ಗಳಷ್ಟು ಅಗಲವಾಗಿದ್ದು, ಭವಿಷ್ಯದಲ್ಲಿ 8-ಲೇನ್‌ಗೆ ಇದನ್ನು ವಿಸ್ತರಿಸಬಹುದು. ಸುಮಾರು ₹ 22,500 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಪೂರ್ವಭಾಗದ ವಿಶೇಷವಾಗಿ ಲಖನೌ, ಬಾರಾಬಂಕಿ, ಅಮೇಥಿ, ಅಯೋಧ್ಯೆ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಅಜಂಗಢ, ಮೌವ, ಗಾಜಿಪುರ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ, Sukhoi Su-30MKI ಮತ್ತು C-130J ಸೂಪರ್ ಹರ್ಕ್ಯುಲಸ್‌ನಂತಹ ಯುದ್ಧ ವಿಮಾನಗಳು ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಇಂದು ಇಲ್ಲಿ ಇಳಿಯಲಿವೆ. ಈ ಫೈಟರ್ ಜೆಟ್‌ಗಳಲ್ಲಿ ಹೆಚ್ಚಿನವು ಲ್ಯಾಂಡಿಂಗ್ ಆದ ತಕ್ಷಣ 'Touch and Go' ಕಾರ್ಯಾಚರಣೆಯನ್ನು ಹೊಂದಿರುತ್ತವೆ. ಈ ಕಾರ್ಯಕ್ರಮಕ್ಕಾಗಿ ಸುತ್ತಮುತ್ತಲಿನ ಜಮೀನುಗಳನ್ನು ತೆರವುಗೊಳಿಸಲಾಗಿದೆ.