ನವದೆಹಲಿ: ಭಾರತ-ಚೀನಾ ಗಡಿ ಸಮೀಪದ ಗಾಲ್ವಾನ್‌ನಲ್ಲಿ ಚೀನಿ ಸೈನಿಕರ ವಿರುದ್ಧ ವೀರಾವೇಶದಿಂದ ಹೋರಾಡಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರಿಗೆ ಕೇಂದ್ರ ಸರ್ಕಾರ ಮಹಾವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.
ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತೋಷ್ ಬಾಬು ಅವರ ತಾಯಿ ಮಂಜುಳ ಹಾಗೂ ಪತ್ನಿ ಸಂತೋಷಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕೇಂದ್ರ ಸರ್ಕಾರವು ಸಂತೋಷ್ ಬಾಬು ಅವರ ಸೇವೆಯ ಸ್ಮರಣಾರ್ಥ ಮರಣೋತ್ತರವಾಗಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿಯನ್ನು ಘೋಷಿಸಿತ್ತು. ಸೇನೆಯಲ್ಲಿ ತೋರಿದ ಧೈರ್ಯ ಹಾಗೂ ಶೌರ್ಯದ ಸಂಕೇತವಾಗಿ ನೀಡಲಾಗುತ್ತದೆ. 'ಮಹಾ ವೀರ ಚಕ್ರ' ಸೇನೆಯಲ್ಲಿನ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ.
ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯವರಾದ ಸಂತೋಷ್ ಬಾಬು 16ನೇ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸೇನೆಗಳ ನಡುವಿನ ಘರ್ಷಣೆಯಲ್ಲಿ ಸಂತೋಷ್ ಬಾಬು ವೀರ ಮರಣಹೊಂದಿದ್ದರು. ಅಂದು ಒಟ್ಟು 21 ಯೋಧರು ಹುತಾತ್ಮರಾಗಿದ್ದರು.
ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವೀಧರರಾಗಿರುವ ಸಂತೋಷ್ ಬಾಬು 2004ರ ಡಿಸೆಂಬರ್‌ನಲ್ಲಿ ಜಮ್ಮುವಿನಲ್ಲಿ ಸೇನಾ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 2019ರ ಡಿಸೆಂಬರ್‌ನಲ್ಲಿ ಕರ್ನಲ್ ಆಗಿ ಬಡ್ತಿ ಪಡೆದಿದ್ದರು. ಬಿಹಾರದ 16ನೇ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆಗಿದ್ದ ಅವರು ತಮ್ಮ ಪಡೆಗಳೊಂದಿಗೆ ಗಾಲ್ವಾನ್ ಕಣಿವೆಗೆ ಚೀನಾ ಸೈನ್ಯವನ್ನು ಹಿಮ್ಮೆಟ್ಟಿಸಲು ಸ್ಥಳಕ್ಕೆ ಹೋಗಿದ್ದರು.
ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಅವರಿಗೆ ಗ್ರೂಪ್-1 ಉದ್ಯೋಗದ ಜತೆಗೆ 4 ಕೋಟಿ ರೂ.ಗಳ ಚೆಕ್ಅನ್ನು ತೆಲಂಗಾಣ ಸರ್ಕಾರ ನೀಡಿದೆ. ಸದ್ಯ ಈಕೆ ಯಾದಾದ್ರಿ ಭುವನೇಶ್ವರ ಜಿಲ್ಲೆಯಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:Watch: 'ಯುದ್ಧ ವೀರ' ಅಭಿನಂದನ್ ವರ್ಧಮಾನ್ಗೆ 'ವೀರ ಚಕ್ರ' ಪ್ರಶಸ್ತಿ ಪ್ರದಾನ