ತಿರುವನಂತಪುರಂ (ಕೇರಳ): ಕರ್ನಾಟಕದ ರೈತ ಕುಟುಂಬದಿಂದ ಬಂದಿರುವ ಹೆಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಹುದ್ದೆಗೇರುವ ಮೂಲಕ ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಿ ಸಮ್ಮಿಶ್ರ ಸರ್ಕಾರವನ್ನು ನಡೆಸಿದ ಜನತಾ ಪರಿವಾರದ ಪ್ರಬಲ ನಾಯಕ. ಒಂದೊಮ್ಮೆ ನರೇಂದ್ರ ಮೋದಿಯವರ ಕಟು ಟೀಕಾಕಾರರಾಗಿದ್ದು, ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಜತೆ ಸೇರಿ ಸ್ಪರ್ಧಿಸಲು ಎನ್‌ಡಿಎ ಮೈತ್ರಿಕೂಟ ಸೇರಿದ್ದಾರೆ.
ಗುರುವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ವರಿಷ್ಠ ದೇವೇಗೌಡರು, ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಪದಚ್ಯುತಗೊಳಿಸಿ, ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ಪ್ರಕಟಿಸಿದ್ದರು. ಆದರೆ, ಈ ಪತ್ರಿಕಾಗೋಷ್ಠಿಯಲ್ಲಿ ಅವರು ನೀಡಿರುವ ಹೇಳಿಕೆಗಳು ಕರ್ನಾಟಕದ ಹೊರಗೆ, ವಿಶೇಷವಾಗಿ ಕೇರಳದಲ್ಲಿ ಹೊಸ ರಾಜಕೀಯ ಅಲೆಗಳನ್ನು ಎಬ್ಬಿಸಿದೆ. ಯಾಕೆಂದರೆ, ಕೇರಳದಲ್ಲಿ ಜೆಡಿಎಸ್ನ ಇಬ್ಬರು ಶಾಸಕರಿದ್ದಾರೆ. ಇವರಲ್ಲಿ ಒಬ್ಬರು ಸಿಪಿಎಂ ನೇತೃತ್ವದ ಎಲ್ಡಿಎಫ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಆದ್ದರಿಂದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡರು ಪ್ರಕಟಿಸುವ ನಿರ್ಧಾರಗಳು ಕೇರಳದಲ್ಲಿ ಪರಿಣಾಮ ಬೀರುವುದು ಸ್ಪಷ್ಟ. ಹೀಗಾಗಿ ಗುರುವಾರ ದೇವೇಗೌಡರು ಕೆಲ ಮೃದು ಮಾತುಗಳ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುರಿತು ನೀಡಿದ ಹೇಳಿಕೆಯು ಕೋಲಾಹಲಕ್ಕೆ ಕಾರಣವಾಗಿದೆ. ಮೊದಲಿಗೆ ಕೇರಳದ ಜೆಡಿಎಸ್ ರಾಜ್ಯ ಘಟಕ ನಮ್ಮ ಜತೆಗಿದೆ ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಹೊಸ ರಾಜಕೀಯ ಮೈತ್ರಿ ಏರ್ಪಟ್ಟ ಸಂದರ್ಭವೂ ಅಲ್ಲಿನ ನಮ್ಮ ಸಚಿವರಿಗೆ ಗೊತ್ತಿದೆ ಎಂದಿದ್ದಾರೆ. ನಂತರ, ಕೇರಳದ ಎಡಪಕ್ಷದ ಮುಖ್ಯಮಂತ್ರಿಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ಬಿಜೆಪಿ ಸೇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಗೌಡರು ವಿವರಿಸಿದ್ದಾರೆ. ಇದರ ಬೆನ್ನಲ್ಲೇ ಕೇರಳದಲ್ಲಿ ಜೆಡಿಎಸ್ ವಿಚಾರವಾಗಿ ರಾಜಕೀಯ ಚರ್ಚೆ ಜೋರಾಗಿದೆ.