ನವದೆಹಲಿ:ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿ ವಿಚಾರ ಹಾಗೂ ಆರ್ಟಿಕಲ್ 370 ರದ್ಧತಿ ವಿಚಾರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಜತೆ ಸರ್ವಪಕ್ಷ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ನ ಗುಲಾಂ ನಬಿ ಆಜಾದ್, ಪಿಡಿಪಿ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಸೇರಿದಂತೆ 14 ಪಕ್ಷಗಳ ಪ್ರಮುಖ ಮುಖಂಡರು ಭಾಗಿಯಾಗಿದ್ದರು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ್ದು, ಸೂಕ್ತ ಸಮಯದಲ್ಲಿ ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮಾನ ನೀಡಲಾಗುವುದು ಎಂದು ನಮೋ ಹೇಳಿದ್ದಾರೆ ಎಂಬ ಮಾತು ತಿಳಿದು ಬಂದಿದೆ.
ಪ್ರಮುಖವಾಗಿ ಸಭೆಯಲ್ಲಿ ಪ್ರಮುಖವಾಗಿ ರಾಜ್ಯದ ಸ್ಥಾನಮಾನ ಮರು ನೀಡಿಕೆ, ಪ್ರಜಾಪ್ರಭುತ್ವ ಸ್ಥಾಪನೆಗೋಸ್ಕರ ವಿಧಾನಸಭೆ ಚುನಾವಣೆ, ಕಾಶ್ಮೀರ ಪಂಡಿತರಿಗೆ ಪುನವರ್ಸತಿ, ಬಂಧಿತರಾಗಿರುವ ರಾಜಕೀಯ ಮುಖಂಡರ ಬಿಡುಗಡೆಗೆ ಅನೇಕ ಮುಖಂಡರು ಆಗ್ರಹಿಸಿದ್ದಾರೆ.
ಸದ್ಯ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಪಡಿಸಲು ನಾವು ಬದ್ಧರಾಗಿದ್ದು, ವಿವಿಧ ಮಂಡಳಿ ಹಾಗೂ ವಿಧಾನಸಭೆ ಚುನಾವಣೆ ಯಶಸ್ವಿಯಾಗಿ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ನಮೋ ತಿಳಿಸಿದ್ದಾಗಿ ವರದಿಯಾಗಿದೆ. ಪ್ರಜಾಪ್ರಭುತ್ವ ಅತಿದೊಡ್ಡ ಶಕ್ತಿಯಾಗಿದ್ದು, ವಿಶೇಷವಾಗಿ ಜಮ್ಮು-ಕಾಶ್ಮೀರದ ಯುಜನರಿಗೆ ರಾಜಕೀಯ ನಾಯಕತ್ವ ಒದಗಿಸಬೇಕು ಮತ್ತು ಅವರ ಆಕಾಂಕ್ಷೆ ಸರಿಯಾಗಿ ಈಡೇರಿಸಬೇಕು ಎಂದು ನಮೋ ತಿಳಿಸಿದ್ದಾರೆ. ಜತೆಗೆ ಜಮ್ಮು-ಕಾಶ್ಮೀರ ಕ್ಷೇತ್ರ ವಿಂಗಡನೆ ನಿರ್ಧಾರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು - ಕಾಶ್ಮೀರ ವಿಚಾರವಾಗಿ ಇಂದಿನ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದಿದ್ದು, ಪ್ರತಿಯೊಬ್ಬರು ಪ್ರಜಾಪ್ರಭುತ್ವ ಮತ್ತು ಅಲ್ಲಿನ ಸಂವಿಧಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.
ಸಭೆಯಲ್ಲಿ ಭಾಗಿಯಾದ ಮುಖಂಡರ ಅಭಿಪ್ರಾಯ
ಆರ್ಟಿಕಲ್ 370 ಮರುಸ್ಥಾಪನೆಗೆ ಹೋರಾಟ: ಮುಫ್ತಿ:ಸಭೆಯಲ್ಲಿ ಪ್ರಧಾನಿ ಮೋದಿ ಪಾಕ್ನೊಂದಿಗೆ ಮಾತನಾಡುವ ಭರವಸೆ ನೀಡಿದ್ದು, ಅದಕ್ಕೆ ನಾನು ಅಭಿನಂದಿಸುತ್ತೇನೆ. ಒಳನುಸುಳುವಿಕೆ ಹಾಗೂ ಜಮ್ಮು- ಕಾಶ್ಮೀರದ ಶಾಂತಿಗೋಸ್ಕರ ಪಾಕಿಸ್ತಾನದೊಂದಿಗೆ ಮಾತನಾಡುವ ಅವಶ್ಯಕತೆ ಇದೆ.
ಆರ್ಟಿಕಲ್ 370 ರದ್ದುಗೊಂಡಾಗಿನಿಂದಲೂ ಇಲ್ಲಿನ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನ ಮರುಸ್ಥಾಪನೆ ಮಾಡಲು ನಮ್ಮ ಹೋರಾಟ ಮುಂದುವರೆಯಲಿದೆ. ಅದು ಪಾಕಿಸ್ತಾನದಿಂದ ಬಂದಿಲ್ಲ. ನೆಹರು, ಸರ್ದಾರ್ ಪಟೇಲ್ ಅವರ ಕೊಡುಗೆ ಎಂದಿದ್ದಾರೆ.