ಇಂದು ವಿಶ್ವ ಸಿಂಹ ದಿನ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಏಷ್ಯಾಟಿಕ್ ಸಿಂಹಗಳ ಆವಾಸ ಸ್ಥಾನವಾಗಿರುವುದಕ್ಕೆ ಹೆಮ್ಮೆ ಮೂಡಿಸಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಸಿಂಹಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಟ್ವೀಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಂಹಗಳ ಆವಾಸಸ್ಥಾನದ ಸುರಕ್ಷತೆಗೆ ಕೆಲಸ ಮಾಡುತ್ತಿರುವವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದಿನ ಪೀಳಿಗೆಗೆ ಸಿಂಹಗಳ ಸಂಖ್ಯೆ ಅಭಿವೃದ್ಧಿ ಆಗುತ್ತಿರುವುದ್ನು ಖಾತ್ರಿಪಡಿಸಿಕೊಳ್ಳುವುದರ ಮೂಲಕ ಸಿಂಹವನ್ನು ಗೌರವಿಸಿ, ರಕ್ಷಿಸುವುದನ್ನು ಮುಂದುವರಿಸೋಣ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ರಾಜ ಗಾಂಭೀರ್ಯಕ್ಕೆ ಹೆಸರಾಗಿರುವ ಸಿಂಹಗಳು ಬಲಶಾಲಿಯಾಗಿದ್ದು, ಇವು ಒಮ್ಮೆ ಘರ್ಜಿಸಿದರೆ ಸಾಕು ನೂರಾರು ಮೈಲಿವರೆಗೆ ಆ ಶಬ್ದ ಕೇಳಿಸುತ್ತದೆ. ಪ್ರತಿ ವರ್ಷ ಸಿಂಹಗಳ ದಿನವನ್ನು ಆಗಸ್ಟ್ 10ರಂದು ಆಚರಿಸಲಾಗುತ್ತದೆ. ಈ ಮೂಲಕ ಕಾಡಿನ ರಾಜನ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಇನ್ನು, ಸಿಂಹಗಳ ದಿನ ಆಚರಣೆಯ ಮುಖ್ಯ ಉದ್ದೇಶ ಎಂದರೆ ಸಿಂಹದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ತಿಳಿಸುವುದಾಗಿದೆ. ಪ್ರಸ್ತುತ ಸಿಂಹಗಳ ಆವಾಸಸ್ಥಳದ ಅಳಿವು, ಸೆರೆ ಮತ್ತು ಬೇಟೆಯಾಡುವಂತಹ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಇವುಗಳ ಮೇಲೆ ಬೆಳಕು ಚೆಲ್ಲುವುದು ಅಗತ್ಯವಾಗಿದೆ.
ಸಿಂಹಗಳ ದಿನದ ಇತಿಹಾಸ: ಸಿಂಹಗಳ ದಿನ ಆಚರಣೆಗೆ ಒಂದಿದ್ದು 2013ರಲ್ಲಿ. ಡೆರೆಕ್ ಮತ್ತು ಬೆವೆರ್ಲೆ ಜೋಬರ್ಟ್ ಈ ದಿನಕ್ಕೆ ಮುನ್ನುಡಿ ಬರೆದರು. ಇವರು ಜಗತ್ತಿನಾದ್ಯಂತ ಸಿಂಹಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಗಮನ ಸೆಳೆದರು. ಇವರಿಬ್ಬರು ಒಟ್ಟಾಗಿ ನ್ಯಾಷನಲ್ ಜಿಯೋಗ್ರಾಫಿಕ್ ಮತ್ತು ಬಿಗ್ ಕ್ಯಾಟ್ ಇನ್ಸಿಯೇಟಿವ್ (ಬಿಸಿಐ) ಅನ್ನು 2009ರಲ್ಲಿ ಆರಂಭಿಸಿದರು. ಇದರ ಅಂತಿಮ ಪರಿಣಾಮವಾಗಿ 2013ರಲ್ಲಿ ವಿಶ್ವ ಸಿಂಹ ದಿನವನ್ನು ಆರಂಭಿಸಿ, ಸಿಂಹಗಳ ಕುರಿತು ಜಾಗೃತಿ ಮತ್ತು ರಕ್ಷಣೆ ಬಗ್ಗೆ ಅರಿವು ಮೂಡಿಸಿದರು.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಷನ್ ಆಫ್ ನೇಚರ್ ವರದಿ ಅನುಸಾರ, ನಮ್ಮ ಭೂಮಿಯಲ್ಲಿ 30,000 ದಿಂದ 1,00,00 ಸಿಂಹಗಳು ಮಾತ್ರ ಇವೆ. ಇವು ಕೂಡ ಅಳಿವಿನಂಚಿನಲ್ಲಿರುವ ಪ್ರಾಣಿಗಳಾಗಿವೆ. ಅದರ ಅರ್ಧ ಇವುಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆ ಇವುಗಳ ರಕ್ಷಣೆಗೆ ಮುಂದಾಗಬೇಕಿದೆ. ಸಿಂಹಗಳು ಇತರೆ ಪ್ರಾಣಿಗಳಂತೆ ಅಪಾಯದ ಹಾದಿಯಲ್ಲಿವೆ ಎಂದಿದೆ.