ಭೋಪಾಲ್ (ಮಧ್ಯಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ರಾಜ್ಯದ ಬಿನಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50,700 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
10 ನೂತನ ಕೈಗಾರಿಕಾ ಯೋಜನೆಗಳು:ಯೋಜನೆಗಳ ಪೈಕಿ ಬಿನಾ ರಿಫೈನರಿಯಲ್ಲಿ ಪೆಟ್ರೋಕೆಮಿಕಲ್ ಸಂಕೀರ್ಣ ಮತ್ತು ರಾಜ್ಯಾದ್ಯಂತ 10 ಹೊಸ ಕೈಗಾರಿಕಾ ಯೋಜನೆಗಳು ಒಳಗೊಂಡಿವೆ. ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದ ಹೊಸ ಯೋಜನೆಗಳು ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದರು.
1,200 ಕೆಟಿಪಿಎ ಎಥಿಲೀನ್, ಪ್ರೊಪಿಲೀನ್ ಉತ್ಪಾದನೆ:ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಅತ್ಯಾಧುನಿಕ ಬಿನಾ ರಿಫೈನರಿ ಸುಮಾರು 49,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಲಿದೆ. ಸುಮಾರು 1,200 ಕೆಟಿಪಿಎ (ವರ್ಷಕ್ಕೆ ಕಿಲೋ-ಟನ್) ಎಥಿಲೀನ್ ಮತ್ತು ಪ್ರೊಪಿಲೀನ್ ಉತ್ಪಾದಿಸಲಿದೆ. ಜವಳಿ, ಪ್ಯಾಕೇಜಿಂಗ್ ಮತ್ತು ಫಾರ್ಮಾ ಮುಂತಾದ ವಿವಿಧ ಕ್ಷೇತ್ರಗಳು ಇದರಲ್ಲಿ ಒಳಗೊಂಡಿವೆ. ಈ ಯೋಜನೆ ದೇಶದ ಆಮದು ಅವಲಂಬನೆಯನ್ನು ತಗ್ಗಿಸಲಿದೆ. ಪ್ರಧಾನ ಮಂತ್ರಿಯವರ 'ಆತ್ಮನಿರ್ಭರ್ ಭಾರತ್' ದೂರದೃಷ್ಟಿ ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಮೆಗಾ ಯೋಜನೆಯು ವಿಫುಲ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪೆಟ್ರೋಲಿಯಂ ವಲಯದಲ್ಲಿರುವ ಕೆಳ ಹಂತದ ಕೈಗಾರಿಕೆಗಳ ಅಭಿವೃದ್ಧಿಯನ್ನೂ ಉತ್ತೇಜಿಸುತ್ತದೆ ಎಂದರು.