ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕರ್ನಾಟಕದ ಜನತೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಶುಭಾಶಯ ಕೋರಿ ಗಮನ ಸೆಳೆದಿದ್ದಾರೆ.
"ಯುಗಾದಿ ಹಬ್ಬದ ಈ ಸಮಯದಲ್ಲಿ ಕರ್ನಾಟಕದ ನಮ್ಮ ಸಹೋದರ, ಸಹೋದರಿಯರಿಗೆ ಹಾಗೂ ವಿಶ್ವದೆಲ್ಲೆಡೆ ಇರುವ ಕನ್ನಡಿಗರಿಗೆ ಶುಭಾಶಯಗಳು ಮತ್ತು ಶುಭಹಾರೈಕೆಗಳು. ಈ ಶುಭ ಸಂದರ್ಭವು ಎಲ್ಲರಿಗೂ ಒಳ್ಳೆಯ ಆರೋಗ್ಯ, ನೆಮ್ಮದಿ ಹಾಗೂ ಸಮೃದ್ಧತೆ ತರಲಿ" ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
ಪಿಎಂ ಮೋದಿ ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, "ನಿಮ್ಮೆಲ್ಲರಿಗೂ ಯುಗಾದಿಯ ಶುಭಕಾಮನೆಗಳು. ಮುಂಬರುವ ವರ್ಷ ಅದ್ಭುತವಾಗಲಿ. ನೀವೆಲ್ಲರೂ ಆರೋಗ್ಯ ಹಾಗೂ ಸಂತಸದಿಂದಿರಿ. ಎಲ್ಲೆಡೆ ಸಮೃದ್ಧಿ ಹಾಗು ಸಂತೋಷ ಪಸರಿಸಲಿ" ಎಂದು ಕೋರಿದ್ದಾರೆ.
ಕನ್ನಡಿಗರಿಗೆ ಮಾತ್ರವಲ್ಲದೇ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ತೆಲುಗು ಬಾಂಧವರಿಗೂ ಮೋದಿ ಹಾಗೂ ಕೋವಿಂದ್ ತೆಲುಗು ಭಾಷೆಯಲ್ಲಿ ವಿಶ್ ಮಾಡಿದ್ದಾರೆ. ಪ್ರಧಾನಿ ಮೋದಿ ದೇಶದ ಜನತೆಗೆ ಹಿಂದಿಯಲ್ಲಿ ಯುಗಾದಿ ಹಬ್ಬದ ಶುಭ ಕೋರಿದ್ದಾರೆ. ಹಾಗೆಯೇ ರಾಷ್ಟ್ರಪತಿ ಅವರು ಕೇರಳ ಜನತೆಗೆ 'ವಿಶು' ಹಬ್ಬದ ಶುಭಾಶಯಗಳನ್ನು ಮಲಯಾಳಂನಲ್ಲಿ ಬರೆದು ಟ್ವೀಟ್ ಮಾಡಿದ್ದಾರೆ.