ನವದೆಹಲಿ: ದೇಶದ ಎಲ್ಲಾ ಪ್ರಧಾನಮಂತ್ರಿಗಳ ಕೊಡುಗೆಗಳನ್ನು ಸ್ಮರಿಸಲು ನಿರ್ಮಿಸಲಾಗಿರುವ 'ಪ್ರಧಾನಮಂತ್ರಿ ಸಂಗ್ರಹಾಲಯ' ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದು, ವಸ್ತು ಸಂಗ್ರಹಾಲಯದೊಳಗೆ ತೆರಳಲು ಅವರು ಮೊದಲ ಟಿಕೆಟ್ ಅನ್ನು ಖರೀದಿಸಿದ್ದಾರೆ. ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸಲು 'ಪ್ರಧಾನಮಂತ್ರಿ ಸಂಗ್ರಹಾಲಯ' ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಮಾರ್ಗದರ್ಶನ ಮಾಡಲ್ಪಟ್ಟಿದೆ. ಪ್ರಧಾನಮಂತ್ರಿ ಸಂಗ್ರಹಾಲಯವು ಸಿದ್ಧಾಂತ ಅಥವಾ ಅಧಿಕಾರಾವಧಿಯನ್ನು ಲೆಕ್ಕಿಸದೆ, ಸ್ವಾತಂತ್ರ್ಯದ ನಂತರ ಭಾರತದ ಪ್ರತಿಯೊಬ್ಬ ಪ್ರಧಾನಿಗೆ ಸಲ್ಲಿಸುವ ಗೌರವವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆಂದು ಪ್ರಧಾನ ಮಂತ್ರಿಗಳ ಕಚೇರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಈ ವಸ್ತು ಸಂಗ್ರಹಾಲಯವು ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲದೇ ಎಲ್ಲಾ ಪ್ರಧಾನಿಗಳನ್ನು ಒಳಗೊಳ್ಳುವ ಪ್ರಯತ್ನವಾಗಿದೆ. ಇದು ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ನಾಯಕತ್ವ, ದೂರದೃಷ್ಟಿ ಮತ್ತು ಸಾಧನೆಗಳ ಬಗ್ಗೆ ಯುವ ಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಬ್ಲಾಕ್ 1 ಮತ್ತು ಬ್ಲಾಕ್ 2 ಎಂದು ಗುರುತಿಸಲಾಗುತ್ತದೆ. ಈ ಮೊದಲು ಬ್ಲಾಕ್ 1 ಅನ್ನು ತೀನ್ ಮೂರ್ತಿ ಭವನ್ ಎಂದು ಕರೆಯಲಾಗುತ್ತಿತ್ತು. ನಂತರ ಅದನ್ನು ನವೀಕರಣ ಮಾಡಲಾಗಿದೆ. ಬ್ಲಾಕ್ 2 ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಎರಡು ಬ್ಲಾಕ್ಗಳ ವಿಸ್ತೀರ್ಣ 15,600 ಚದರ್ ಮೀಟರ್‌ಗಳು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಹೇಳಿದೆ.