ಗಾಜಿಯಾಬಾದ್ (ಉತ್ತರ ಪ್ರದೇಶ) : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗಾಜಿಯಾಬಾದ್‌ನಲ್ಲಿ ದೇಶದ ಮೊದಲ ಕ್ಷಿಪ್ರ ರೈಲು ನಮೋ ಭಾರತ್ (PM Modi inaugurates NaMo Bharat)ಗೆ ಚಾಲನೆ ನೀಡಿದರು. ದೆಹಲಿ ಮತ್ತು ಮೀರತ್ ನಡುವೆ 82 ಕಿಲೋ ಮೀಟರ್ ಉದ್ದದ ಕಾರಿಡಾರ್ ನಿರ್ಮಿಸಲಾಗಿದ್ದು, ಈ ರೈಲಿಗೆ 'ನಮೋ ಭಾರತ್' ಎಂದು ಹೆಸರಿಡಲಾಗಿದೆ.
ಮೊದಲ ಹಂತದಲ್ಲಿ ಈ ರೈಲು ಸಾಹಿಬಾಬಾದ್ ಮತ್ತು ದುಹೈ ನಡುವೆ 17 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ಮೋದಿ ಅವರು ರೈಲಿಗೆ ಚಾಲನೆ ನೀಡುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. ಉದ್ಘಾಟನೆಯ ನಂತರ ಅಕ್ಟೋಬರ್ 21 ರಿಂದ ಪ್ರಯಾಣಿಕರು ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ನಮೋ ಭಾರತ್ ರೈಲು ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ಮೀರತ್‌ನ ಮದಿಪುರಂ ನಿಲ್ದಾಣದ ನಡುವೆ 2025 ರ ವೇಳೆಗೆ ಪ್ರಯಾಣಿಸಲಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಅನುಮೋದನೆ ಪಡೆದ ನಂತರ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಈ ಹೈಸ್ಪೀಡ್ ರೈಲು ಅಕ್ಟೋಬರ್ ತಿಂಗಳಲ್ಲಿ ಸಾಹಿಬಾಬಾದ್‌ನಿಂದ ಚಲಿಸಲಿದೆ. ಗುಲ್ಧರ್ ಮೂಲಕ ಗಾಜಿಯಾಬಾದ್ ತಲುಪಿ, ಸುಮಾರು 17 ನಿಮಿಷಗಳಲ್ಲಿ ದುಹೈ ಡಿಪೋವನ್ನು ತಲುಪುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ಅವರು ಗಾಜಿಯಾಬಾದ್‌ನಲ್ಲಿ 17 ಕಿ.ಮೀ ಉದ್ದದ ರ‍್ಯಾಪಿಡ್ ಎಕ್ಸ್ ರೈಲು ಕಾರಿಡಾರ್ ಅನ್ನು ಉದ್ಘಾಟಿಸಿದರು. ಅಷ್ಟೇ ಅಲ್ಲದೆ, ಇದು ನಮೋ ಭಾರತ್ ಮುಂಬೈನ ಮೊನೊ ಮತ್ತು ದೆಹಲಿ-ಎನ್‌ಸಿಆರ್ ಮೆಟ್ರೋಗಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ.