ನವದೆಹಲಿ: ಇಂದು ದೇಶದಲ್ಲಿ ಪವಿತ್ರ ರಕ್ಷಾ ಬಂಧನದ ಸಂಭ್ರಮ. ಈ ಶುಭ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. "ರಕ್ಷಾಬಂಧನದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳು" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಸಹ ರಕ್ಷಾಬಂಧನದಂದು ಶುಭಾಶಯ ಸಲ್ಲಿಸಿದ್ದಾರೆ. ಈ ಹಬ್ಬದ ಮೂಲಕ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಶಪಥ ಮಾಡೋಣ ಎಂದು ಕನ್ನಡದಲ್ಲೇ ಶುಭ ಕೋರಿದ್ದಾರೆ.
"ರಕ್ಷಾಬಂಧನದ ಶುಭಾಶಯಗಳು. ರಕ್ಷಾಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ವಿಶೇಷ ಮತ್ತು ಆಳವಾದ ಪ್ರೀತಿ ಮತ್ತು ಗೌರವದ ಆಚರಣೆಯಾಗಿದೆ. ಈ ಶುಭ ದಿನದಂದು, ನಾವು ಮಹಿಳೆಯರ ಘನತೆಯನ್ನು ಎತ್ತಿಹಿಡಿಯಲು ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ಸಂಕಲ್ಪ ಮಾಡೋಣ" ಎಂದು ಉಪರಾಷ್ಟ್ರಪತಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಹಬ್ಬದ ಶುಭಾಶಯ ಕೋರಿದ್ದಾರೆ. "ರಕ್ಷಾಬಂಧನದ ಶುಭ ಸಂದರ್ಭದಲ್ಲಿ ಎಲ್ಲಾ ಜನರಿಗೆ ಹಾರ್ದಿಕ ಶುಭಾಶಯಗಳು" ಎಂದು ಶಾ ಟ್ವೀಟ್ ಮಾಡಿದ್ದಾರೆ.
ರಕ್ಷಾಬಂಧನವು ಅತ್ಯಂತ ಜನಪ್ರಿಯ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಇದು ಒಡಹುಟ್ಟಿದವರ ನಡುವಿನ ವಿಶೇಷ ಬಾಂಧವ್ಯದ ನೆನಪಿಗಾಗಿ ರಾಷ್ಟ್ರದಾದ್ಯಂತ ಆಚರಿಸಲಾಗುವ ಹಬ್ಬವಾಗಿದೆ. ಸಾಂಪ್ರದಾಯಿಕವಾಗಿ, ಈ ದಿನ, ಸಹೋದರಿಯರು ತಮ್ಮ ಸಹೋದರರ ಕೈಗೆ ರಾಖಿಯನ್ನು ಕಟ್ಟುತ್ತಾರೆ. ಬಳಿಕ ಇಬ್ಬರೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.