ಕರ್ನಾಟಕ

karnataka

ETV Bharat / bharat

Rahul Gandhi: ಮಣಿಪುರ ಹೊತ್ತಿ ಉರೀತಿದ್ರೆ, ಪ್ರಧಾನಿ ಲೋಕಸಭೆಯಲ್ಲಿ ಜೋಕ್​ ಮಾಡ್ತಿದ್ರು: ರಾಹುಲ್​ ಗಾಂಧಿ

Rahul Gandhi on PM Modi: ಈಶಾನ್ಯ ರಾಜ್ಯ ಮಣಿಪುರ ತಿಂಗಳುಗಳಿಂದ ಹೊತ್ತಿ ಉರಿಯುತ್ತಿದೆ. ಅಲ್ಲಿ ಜನರ ಹತ್ಯೆಯಾಗುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ, ಪ್ರಧಾನಿ ಮೋದಿ ಲೋಕಸಭೆಯಲ್ಲಿ ಜೋಕ್‌ ಮಾಡುತ್ತಿದ್ದರು ಎಂದು ರಾಹುಲ್​ ಗಾಂಧಿ ಟೀಕಿಸಿದ್ದಾರೆ.

Etv Bharat
Etv Bharat

By

Published : Aug 11, 2023, 6:38 PM IST

ನವದೆಹಲಿ:ಮಣಿಪುರ ಹಿಂಸಾಚಾರ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು. ''ಪ್ರಧಾನಿ ಮೋದಿ ಮಣಿಪುರವನ್ನು ಬೆಂಕಿಯಲ್ಲಿ ಉರಿಯಲು ಬಯಸುತ್ತಿದ್ದಾರೆ. ಅವರು ಬೆಂಕಿ ನಂದಿಸಲು ಪ್ರಯತ್ನಿಸುತ್ತಿಲ್ಲ'' ಎಂದು ಗಂಭೀರ ಆರೋಪ ಮಾಡಿದ ರಾಹುಲ್​, ''ಭಾರತೀಯ ಸೇನೆಯು ಸಹಾಯದಿಂದ ಎರಡೇ ದಿನದಲ್ಲಿ ಹಿಂಸಾಚಾರ ನಿಲ್ಲಿಸಬಹುದು'' ಎಂದು ಸಲಹೆ ನೀಡಿದರು.

ಕಾಂಗ್ರೆಸ್​ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ''ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು. ಕೊನೆಯ ಎರಡು ನಿಮಿಷ ಮಾತ್ರ ಮಣಿಪುರದ ಬಗ್ಗೆ ಪ್ರಸ್ತಾಪಿಸಿದರು'' ಎಂದು ಟೀಕಿಸಿದರು.

''ಭಾರತದ ಪ್ರಧಾನಿ ತಮಾಷೆ ಮಾಡಬಾರದು. ಅವರಿಗೆ ಮಾತನಾಡಲು ನಾನು ಅಥವಾ ಕಾಂಗ್ರೆಸ್​ ವಿಷಯವಾಗಿರಲಿಲ್ಲ. ಮಣಿಪುರ ಪ್ರಮುಖ ವಿಷಯವಾಗಿತ್ತು. ಮಣಿಪುರದಲ್ಲಿ ಏನಾಗುತ್ತಿದೆ ಮತ್ತು ಅದನ್ನು ಏಕೆ ನಿಲ್ಲಿಸಲಾಗುತ್ತಿಲ್ಲ ಎಂಬುದೇ ಮುಖ್ಯ ವಿಷಯ. ರಾಜಕೀಯ ಬದಿಗಿಟ್ಟು ಪ್ರಧಾನಿ, ರಾಜಕಾರಣಿಯಾಗಿ ಮಾತನಾಡದೇ ಜನರ ಪರವಾಗಿ ಮಾತನಾಡಬೇಕು'' ಎಂದರು.

ಇದನ್ನೂ ಓದಿ:PM Modi: ಈಶಾನ್ಯ ರಾಜ್ಯಗಳ ಎಲ್ಲ ಸಮಸ್ಯೆಗಳಿಗೆ ಕಾಂಗ್ರೆಸ್‌ ಕಾರಣ; ಮಣಿಪುರದಲ್ಲಿ ಶೀಘ್ರದಲ್ಲೇ ಶಾಂತಿ ಮರುಸ್ಥಾಪನೆ- ಲೋಕಸಭೆಯಲ್ಲಿ ಮೋದಿ

ಮಣಿಪುರಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ರಾಹುಲ್​, "ನಾನು ಮಣಿಪುರದಲ್ಲಿ ಕಂಡಿದ್ದನ್ನು ಕಳೆದ 19 ವರ್ಷಗಳ ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ" ಎಂದು ತಿಳಿಸಿದರು. "ಒಂದು ರಾಜ್ಯವನ್ನು ಇಂದು ಹತ್ಯೆ ಮಾಡಲಾಗಿದೆ. ಆ ರಾಜ್ಯ ವಿಭಜನೆಯಾಗಿದೆ. ಹೀಗಾಗಿಯೇ ಮಣಿಪುರದಲ್ಲಿ ಬಿಜೆಪಿ ಭಾರತವನ್ನು ಕೊಲೆ ಮಾಡಿದೆ ಎಂದು ನಾನು ಹೇಳಿದ್ದೆ'' ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಮುಂದುವರೆದು ಮಾತನಾಡಿ, ''ಸಂಸತ್ತಿನಲ್ಲಿ ಮೋದಿ ನಗುತ್ತಿರುವಾಗ, ಒಬ್ಬ ಪ್ರಧಾನಿ ಈ ರೀತಿ ನಗುವುದು ಹಾಗೂ ಹೇಳುವುದು ಹೇಗೆ ಎಂದು ನನಗನ್ನಿಸಿತು. ಅವರು (ಮೋದಿ) ಮಣಿಪುರಕ್ಕೆ ಹೋಗಲ್ಲ. ಅಲ್ಲಿಗೆ ಹೋಗದಿರಲು ಸ್ಪಷ್ಟ ಕಾರಣಗಳಿವೆ. ಭಾರತೀಯ ಸೇನೆಯು ಮಣಿಪುರದಲ್ಲಿ 2 ದಿನಗಳಲ್ಲಿ ಹಿಂಸಾಚಾರ ನಿಲ್ಲಿಸಬಹುದು. ಆದರೆ, ಪ್ರಧಾನಿ ಮಣಿಪುರವನ್ನು ಸುಡಲು ಬಯಸುತ್ತಾರೆ. ಆ ಬೆಂಕಿಯನ್ನು ನಂದಿಸಲು ಬಯಸುತ್ತಿಲ್ಲ'' ಎಂದು ಆರೋಪಿಸಿದರು.

ಮಣಿಪುರ ವಿಷಯವಾಗಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದಕ್ಕೆ ಗುರುವಾರ ಉತ್ತರವಾಗಿ ಮಾತನಾಡಿದ್ದ ಮೋದಿ ತಮ್ಮ ಎರಡು ಗಂಟೆಗಳ ಸುದೀರ್ಘ ಭಾಷಣದಲ್ಲಿ, ''ಮಣಿಪುರದಲ್ಲಿ ಶಾಂತಿ ನೆಲೆಸುತ್ತದೆ. ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ಇಡೀ ದೇಶ ಮತ್ತು ಸದನವು ಮಣಿಪುರದೊಂದಿಗೆ ಇದೆ. ನಾವು ಒಟ್ಟಿಗೆ ಶಾಂತಿಯನ್ನು ಖಚಿತಪಡಿಸುತ್ತೇವೆ'' ಎಂದು ಭರವಸೆ ನೀಡಿದ್ದರು.

ಇದನ್ನೂ ಓದಿ:No Confidence Motion: ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ 'ಅವಿಶ್ವಾಸ ನಿರ್ಣಯ'ಕ್ಕೆ ಸೋಲು

ABOUT THE AUTHOR

...view details