ನವದೆಹಲಿ:"ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯ ಮತ್ತು ಸತ್ಯದ ಪ್ರತೀಕವಾಗಿ ಹೊರಹೊಮ್ಮಿದೆ. ಸಾಮಾನ್ಯ ನಾಗರಿಕರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಹೀಗಾಗಿ ಈ ಸ್ವಾಯತ್ತ ಸಂಸ್ಥೆಯಿಂದಲೇ ತನಿಖೆ ನಡೆಸಬೇಕು ಎಂದು ಜನರು ಪ್ರತಿಭಟನೆ ನಡೆಸುತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಸಂಸ್ಥೆಯ ವಜ್ರ ಮಹೋತ್ಸವ(60ನೇ ವರ್ಷಾಚರಣೆ) ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "1963 ರ ಏಪ್ರಿಲ್ 1 ರಂದು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಸಿಬಿಐ ಅನ್ನು ಸ್ಥಾಪಿಸಲಾಯಿತು. ಕೇಂದ್ರೀಯ ಸಂಸ್ಥೆಯ ವ್ಯಾಪ್ತಿ ಹಲವು ಪಟ್ಟು ಹೆಚ್ಚಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಿಬಿಐನ ಮುಖ್ಯ ಜವಾಬ್ದಾರಿಯಾಗಿದೆ" ಎಂದು ಹೇಳಿದರು.
"ಸಿಬಿಐ ಸಾಮಾನ್ಯ ನಾಗರಿಕರಿಗೆ ನಂಬಿಕೆ ಮತ್ತು ಭರವಸೆ ಮೂಡಿಸಿದೆ. ಇದು ಸತ್ಯ ಮತ್ತು ನ್ಯಾಯದ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದರಿಂದ ಅದರಿಂದದಲೇ ತನಿಖೆಗೆ ಜನರು ಆಗ್ರಹಿಸುತ್ತಿದ್ದಾರೆ. ಸಿಬಿಐನಂತಹ ವೃತ್ತಿಪರ ಮತ್ತು ದಕ್ಷ ಸಂಸ್ಥೆಗಳಿಲ್ಲದೆ ದೇಶ ಮುಂದುವರಿಯಲು ಸಾಧ್ಯವಿಲ್ಲ. ಬ್ಯಾಂಕ್ ವಂಚನೆಗಳಿಂದ ಹಿಡಿದು ಪ್ರಾಣಿಗಳಿಗೆ ಸಂಬಂಧಿತ ಪ್ರಕರಣಗಳವರೆಗೂ ಸಿಬಿಐನ ಕಾರ್ಯ ವ್ಯಾಪ್ತಿಸಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸ್ವಾಯತ್ತ ಸಂಸ್ಥೆಯ ಮುಖ್ಯ ಹೊಣೆಗಾರಿಕೆಯಾಗಿದೆ" ಎಂದು ಹೇಳಿದರು.
ಭ್ರಷ್ಟಾಚಾರ ಮಾಡಲು ಪೈಪೋಟಿ:"ಕಾಂಗ್ರೆಸ್ ನೇತೃತ್ವದ ಹಿಂದಿನ ಕೇಂದ್ರ ಸರ್ಕಾರವನ್ನು ಟೀಕಿಸಿದ ಪ್ರಧಾನಿ ಮೋದಿ, 2014 ರ ಹಿಂದಿನ ಅವಧಿಯಲ್ಲಿ ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಭ್ರಷ್ಟತೆಯಿಂದ ಕೂಡಿತ್ತು. "ಹತ್ತು ವರ್ಷಗಳ ಹಿಂದೆ ಭ್ರಷ್ಟಾಚಾರ ಮಾಡಲೇ ಪೈಪೋಟಿ ನಡೆಯುತ್ತಿತ್ತು. ದೊಡ್ಡ ದೊಡ್ಡ ಹಗರಣಗಳು ನಡೆದು ಹೋದವು. ಆದರೆ, ಆರೋಪಿಗಳಿಗೆ ಮಾತ್ರ ಹೆದರಿಕೆ ಇರಲಿಲ್ಲ. ಕಾರಣ ವ್ಯವಸ್ಥೆಯು ಅವರ ಬೆಂಬಲಕ್ಕೆ ನಿಂತಿತ್ತು. ಆದರೆ, 2014 ರ ನಂತರ ಬಿಜೆಪಿ ನೇತೃತ್ವದ ಸರ್ಕಾರ ಇದರ ವಿರುದ್ಧ ಸಮರ ಸಾರಿತು. ಭ್ರಷ್ಟಾಚಾರ ಮತ್ತು ಕಪ್ಪುಹಣದ ಬೇರುಗಳನ್ನೇ ಕಿತ್ತುಹಾಕಿತು" ಎಂದು ಹೊಗಳಿದರು.