ನವದೆಹಲಿ:ಇಸ್ರೇಲ್ನ ಪೆಗಾಸಸ್ ಸ್ಪೈವೇರ್ ಇದೀಗ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ. ವಿಶ್ವದಾದ್ಯಂತ 50,000 ಫೋನ್ ನಂಬರ್‌ಗಳನ್ನು ಹ್ಯಾಕ್ ಮಾಡಲಾಗಿದ್ದು ಇದರಲ್ಲಿ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳ ಮೊಬೈಲ್ ಫೋನ್ ಕೂಡಾ ಹ್ಯಾಕ್ ಆಗಿವೆ ಎನ್ನಲಾಗುತ್ತಿದೆ.
ಇಸ್ರೇಲ್ ಮೂಲದ ಸ್ಪೈವೇರ್ ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ, ಕಾಂಗ್ರೆಸ್ನ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಸೇರಿದಂತೆ ಕೆಲವರ ಫೋನ್ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತನಿಖೆಗೊಳಪಡಬೇಕು ಎಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ದೇಶದ ಪತ್ರಕರ್ತರು ಸೇರಿದಂತೆ ಕೆಲವು ಕೇಂದ್ರ ಸಚಿವರ ಫೋನ್ ಹ್ಯಾಕಿಂಗ್ ಮಾಡಲಾಗಿದೆ. ಇದರಲ್ಲಿ ಪಿಎಂ ಹಾಗೂ ಗೃಹ ಸಚಿವರ ಕೈವಾಡವಿದೆ. ಇದರ ತನಿಖೆ ಆರಂಭವಾಗುವುದಕ್ಕೂ ಮೊದಲೇ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಧಾನಿ ತನಿಖೆಗೊಳಪಡಬೇಕು ಎಂದಿದ್ದಾರೆ.