ಜೈಪುರ (ರಾಜಸ್ಥಾನ): ರಾಜಸ್ಥಾನ ಕಾಂಗ್ರೆಸ್ನಲ್ಲಿ ಒಳಜಗಳ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ಮೌನವಾಗಿದ್ದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪೈಲಟ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಪಕ್ಷದ ಮಾಜಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರೊಂದಿಗೆ ಹೋಲಿಕೆ ಮಾಡಿದರು. ಅಲ್ಲದೇ ರಾಜಸ್ಥಾನದ ಬನ್ಸವಾರಾದಲ್ಲಿ ನಡೆದ ಮಾನಗಢ್ ಗೌರವ್ ಗಾಥಾ ಕಾರ್ಯಕ್ರಮದಲ್ಲಿ ಸಿಎಂ ಗೆಹ್ಲೋಟ್ ಅವರು ಪ್ರಧಾನಿ ಮೋದಿಯನ್ನು ಹೊಗಳಿದ್ದನ್ನು ಸಹ ತರಾಟೆಗೆ ತೆಗೆದುಕೊಂಡರು.
ಹೈಕಮಾಂಡ್ ಮಾತು ಕೇಳದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ:ಸಿಎಂ ಜೊತೆಗೆ ಪಿಎಂ ಮೋದಿ ಕೂಡ ಸಿಎಂ ಗೆಹ್ಲೋಟ್ ಅವರನ್ನು ಹೊಗಳಿದ್ದಾರೆ. ಇದು ಬಹಳ ಆಸಕ್ತಿದಾಯಕ ಬೆಳವಣಿಗೆಯಾಗಿದೆ. ಏಕೆಂದರೆ ಪ್ರಧಾನಿ ಮೋದಿ ಗುಲಾಂ ನಬಿ ಆಜಾದ್ ಅವರನ್ನು ಅದೇ ರೀತಿಯಲ್ಲಿ ಹೊಗಳಿದ್ದರು, ಆದರೆ, ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಇನ್ನು ಹೈಕಮಾಂಡ್ ಆದೇಶ ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿನ್ ಪೈಲಟ್ ಒತ್ತಾಯಿಸಿದ್ದಾರೆ.