ಬರೇಲಿ (ಉತ್ತರ ಪ್ರದೇಶ): ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಪ್ರಮುಖ ಆರೋಪಿ, ಡಾನ್ ಟರ್ನ್ಡ್ ರಾಜಕಾರಣಿ ಅತೀಕ್ ಅಹ್ಮದ್‌ನ ಸಹೋದರ ಅಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿವೆ. ಅಶ್ರಫ್ ಎರಡೂವರೆ ವರ್ಷಗಳಿಂದ ಬರೇಲಿ ಸೆಂಟ್ರಲ್ ಜೈಲಿನಲ್ಲಿದ್ದಾನೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಅತೀಕ್ ಅಹ್ಮದ್ ಗ್ಯಾಂಗ್ದ ಪಾತ್ರದ ಬಗ್ಗೆ ತನಿಖಾ ಸಂಸ್ಥೆಗಳು ಶೋಧನೆಯಲ್ಲಿ ತೊಡಗಿದ್ದು, ಕೈದಿ ಅಶ್ರಫ್‌ಗೆ ಸಹಾಯ ಮಾಡಿದ್ದ ಪ್ರಸ್ತುತ ಪಿಲಿಭಿತ್ ಜಿಲ್ಲಾ ಕಾರಾಗೃಹದಲ್ಲಿ ನಿಯೋಜಿಸಿದ್ದ ಜೈಲು ಸಿಬ್ಬಂದಿ ಮನೋಜ್ ಗೌರ್ ಅವರನ್ನು ಬಂಧಿಸಲಾಗಿದೆ. ಮನೋಜ್ ಗೌರ್ ಅವರು ಬರೇಲಿ ಜೈಲಿನಲ್ಲಿದ್ದ ಅತೀಕ್ ಅಹ್ಮದ್ ಅವರ ಸಹೋದರ ಅಶ್ರಫ್ ಅವರನ್ನು ಅಕ್ರಮವಾಗಿ ಭೇಟಿಯಾಗುತ್ತಿದ್ದರು ಎಂಬ ಆರೋಪವಿದೆ.
ತನಿಖೆಯಲ್ಲಿ ಜೈಲು ಸಿಬ್ಬಂದಿ ಮನೋಜ್ ಗೌರ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮನೋಜ್ ಗೌರ್ ಅವರನ್ನು ಬರೇಲಿ ಜಿಲ್ಲಾ ಕಾರಾಗೃಹದಿಂದ 3 ತಿಂಗಳ ಹಿಂದೆ ಪಿಲಿಭಿತ್ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಬಿಜೆಪಿ ಮುಖಂಡ ಉಮೇಶ್ ಹತ್ಯೆಗೆ ಯೋಜನೆ ರೂಪಿಸುವಲ್ಲಿ ಅಶ್ರಫ್ ಪ್ರಮುಖ ಪಾತ್ರ ವಹಿಸಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಶ್ರಫ್‌ನನ್ನು ಹಿಂಬಾಲಕರು ಜೈಲಿನಲ್ಲಿ ಅಕ್ರಮವಾಗಿ ಭೇಟಿಯಾಗುತ್ತಿದ್ದರು. ಇದರ ಬೆನ್ನಲ್ಲೇ ಬರೇಲಿ ಪೊಲೀಸರು ಸೋಮವಾರ ಮತ್ತೊಬ್ಬ ಕೈದಿ ಅಶ್ರಫ್‌ನ ಒಬ್ಬ ಹಿಂಬಾಲಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇದಕ್ಕೂ ಮುನ್ನ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇಲ್ಲಿಯ ವರಗೆ ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಕೆಲ ಆರೋಪಿಗಳಿಗಾಗಿ ಪೊಲೀಸರು ಬಲಿ ಬೀಸಿದ್ದಾರೆ.