ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಏತನ್ಮಧ್ಯೆ ಬುಧವಾರದಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರವೇಶ ದ್ವಾರದ ಸ್ತಂಭದ (ಚೌಕಟ್ಟು) ಚಿತ್ರಗಳನ್ನು ಬಿಡುಗಡೆ ಮಾಡಿದೆ. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ತಂಭದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸ್ತಂಭದ ಮಧ್ಯದಲ್ಲಿ ಕಲಶವನ್ನು (ಕುಂಡ) ಇಟ್ಟು ಪೂಜೆ ಸಲ್ಲಿಸಲಾಯಿತು. ಭಗವಾನ್ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ ಎಂಜಿನಿಯರ್‌ಗಳು ಮತ್ತು ಇತರರು ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ರೈ ಅವರು ಕೆಲವು ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮೆಸೇಜ್ ಮಾಡಿದ್ದಾರೆ. ಗರ್ಭಗುಡಿಯ ಪ್ರವೇಶ ದ್ವಾರದ ಸ್ತಂಭ ಅಥವಾ ಎತ್ತರದ ವೇದಿಕೆಯ ನಿರ್ಮಾಣವು ಪೂಜೆಯೊಂದಿಗೆ ಮುಗಿದಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕುಮಾರ್, ಎಲ್ ಅಂಡ್ ಟಿಯಿಂದ ವಿನೋದ್ ಮೆಹ್ತಾ, ಟಾಟಾದಿಂದ ವಿನೋದ್ ಶುಕ್ಲಾ, ಟ್ರಸ್ಟಿ ಸದಸ್ಯ ಅನಿಲ್ ಮಿಶ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀರಾಮ ಜನ್ಮಭೂಮಿ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನ ಶೇ 70ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದೆ. ದೇಗುಲದ ಆವರಣದಲ್ಲಿ ಆವರಣ ಗೋಡೆ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಆದರೆ ನೆಲ ಅಂತಸ್ತಿನ ಮೇಲ್ಛಾವಣಿಯನ್ನು ಹಾಕಲು ಬೇಕಾದ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಸುಮಾರು 80 ಪ್ರತಿಶತದಷ್ಟು ಮುಗಿದಿದೆ.
ಅಲ್ಲದೆ, ಆವರಣದಲ್ಲಿರುವ ಮುಖ್ಯ ದೇವಾಲಯದ ಪಕ್ಕದಲ್ಲಿರುವ ಪುರಾತನ ಫಕೀರೆ ರಾಮ ಮಂದಿರವನ್ನು ಕೆಡವುವ ಕಾರ್ಯ ಗುರುವಾರ ನಡೆಯಲಿದೆ ಎನ್ನಲಾಗಿದೆ. ಫಕೀರೆ ರಾಮ ಮಂದಿರದ ಕೆಲ ಭಾಗವು ಮುಖ್ಯ ದೇವಾಲಯದ ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಜನವರಿ 14, 2024 ರೊಳಗೆ ಗರ್ಭಗುಡಿಯಲ್ಲಿ ಭಗವಾನ್ ರಾಮ್ ಲಲ್ಲಾ ವಿಗ್ರಹವನ್ನು ಸ್ಥಾಪಿಸಲಾಗುವುದು.