ಥಾಣೆ: ಕೆಲವು ಬಾರಿ ಟ್ಯಾಟೂ ಸಹ ಪ್ರಯೋಜನವಾಗುತ್ತದೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಮಾನಸಿಕ ಅಸ್ವಸ್ಥ ಬಾಲಕನ ಕೈಯಲ್ಲಿದ್ದ ಟ್ಯಾಟೂ ಆತನ ಪೋಷಕರನ್ನು ಕೇವಲ 24 ಗಂಟೆಯಲ್ಲಿ ಸೇರುವಂತೆ ಮಾಡಿದೆ.
ಟ್ಯಾಟೂ ಮೂಲಕ ಪೋಷಕರ ಮಡಿಲು ಸೇರಿದ ಮಾನಸಿಕ ಅಸ್ವಸ್ಥ ಬಾಲಕ - ಮಹಾರಾಷ್ಟ್ರ
ಬಾಲಕನ ಕೈಯಲ್ಲಿ ಟ್ಯಾಟೂ ರೂಪದಲ್ಲಿದ್ದ ದೂರವಾಣಿ ನಂಬರ್ಗೆ ಕರೆ ಮಾಡಿದ ರೈಲ್ವೆ ಸಿಬ್ಬಂದಿ ಮಾನಸಿಕ ಅಸ್ವಸ್ಥ ಬಾಲಕನನ್ನು ಪೋಷಕರ ಬಳಿ ಸೇರಿಸಿದ್ದಾರೆ.
ಬಾಲಕ ಅಂಕಿತ್ ಎಂಬಾತ ಮಧ್ಯಪ್ರದೇಶ ರಾಜ್ಯದ ಜಬಲ್ಪುರ್ ಮೂಲದವನಾಗಿದ್ದು ಪೋಷಕರೊಂದಿಗೆ ವಾಸವಾಗಿದ್ದ. ಆದರೆ ಅಚಾನಕ್ ಎಂಬಂತೆ ಜಬಲ್ಪುರ್ ರೈಲ್ವೆ ನಿಲ್ದಾಣದಿಂದ ಆತ ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದಾನೆ. ಬಳಿಕ ಥಾಣೆ ಜಿಲ್ಲೆಯ ಡೊಂಬಿವಿಲಿ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡ ಅಂಕಿತ್ ಅಡ್ಡಾಡಿದ್ದಿಯಾಗಿ ಓಡಾಡುತ್ತಿದ್ದ. ಇದನ್ನು ಕಂಡ ಅಲ್ಲಿನ ಅಧಿಕಾರಿಗಳು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಇನ್ನು ಆತನ ಕೈಯಲ್ಲಿ ಟ್ಯಾಟೂ ರೂಪದಲ್ಲಿ ಹಾಕಿದ್ದ ಮೊಬೈಲ್ ನಂಬರ್ ಕಂಡುಬಂದಿದೆ. ತಕ್ಷಣವೇ ಆ ನಂಬರ್ಗೆ ಕರೆ ಮಾಡಿದ ಅಧಿಕಾರಿಗಳಿಗೆ ನಿಜಾಂಶ ತಿಳಿದುಬಂದಿದೆ. ಆತನ ಪೋಷಕರು ಕರೆ ಸ್ವೀಕರಿಸಿ, ತಮ್ಮ ಮಗ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶನಿವಾರದಂದು ಪೋಷಕರು ಮಹಾರಾಷ್ಟ್ರಕ್ಕೆ ಆಗಮಿಸಿ ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಒಟ್ಟಾರೆಯಾಗಿ ಟ್ಯಾಟೂನಿಂದ ಬಾಲಕನೋರ್ವ ತನ್ನ ತಂದೆ-ತಾಯಿಯನ್ನು ಸೇರುವಂತಾಗಿದ್ದು ಮಾತ್ರ ನಿಜ.