ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾದಲ್ಲಿ ಬೆಂಕಿ ಅವಘಡ ಗ್ರೇಟರ್ ನೋಯ್ಡಾ:ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ಗ್ಯಾಲಕ್ಸಿ ಪ್ಲಾಜಾದಲ್ಲಿ ಗುರುವಾರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯ ನಂತರ ಇಬ್ಬರು ಇಲ್ಲಿನ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಸ್ಥಳೀಯರು ನೆಲದ ಮೇಲೆ ಹರಡಿದ್ದ ಹಾಸಿಗೆಗಳ ರಾಶಿಯ ಮೇಲೆ ಜಿಗಿದಿದ್ದರಿಂದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಅಲ್ಲಿನ ಅವಘಡದ ಘಟನೆಯನ್ನು ಸೆರೆಹಿಡಿದಿದ್ದು, ಪ್ಲಾಜಾದಿಂದ ಹೊಗೆ ಹೊರ ಹೊಮ್ಮುತ್ತಿದ್ದಂತೆ ಇಬ್ಬರು ಗಾಜಿನ ಫಲಕದಿಂದ ಹೊರ ಬರಲು ಪ್ರಯತ್ನಿಸುತ್ತಾರೆ. ಆಗ ಸ್ಥಳೀಯರು ಗಾಬರಿಯಿಂದ ಕೂಗುತ್ತಿದ್ದಂತೆ ಅವರಲ್ಲಿ ಒಬ್ಬರು ಜಾರಿ ಕೆಳಗೆ ಬೀಳುತ್ತಾರೆ. ಘಟನೆಯಲ್ಲಿ ಒಬ್ಬ ಪುರುಷ ಮತ್ತು ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ : ಅವರ ಹೊರತಾಗಿ ಬೆಂಕಿ ಕಾಣಿಸಿಕೊಂಡ ನಂತರ ಇತರ ಜನರು ಗೌರ್ ಸಿಟಿ 1ರ ಬಿಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾಲಕ್ಸಿ ಪ್ಲಾಜಾದ ಮೂರನೇ ಮಹಡಿಯಿಂದ ಹೊರಗೆ ಜಿಗಿಯಲು ಹತಾಶರಾಗಿ ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ವರದಿಗಳ ಪ್ರಕಾರ, ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂಬುದು ತಿಳಿದು ಬಂದಿದೆ.
'ಗ್ರೇಟರ್ ನೋಯ್ಡಾ (ಪಶ್ಚಿಮ) ಎಂದೂ ಕರೆಯಲ್ಪಡುವ ನೋಯ್ಡಾ ಎಕ್ಸ್‌ಟೆನ್ಶನ್‌ನಲ್ಲಿರುವ ಕಟ್ಟಡದ ಅಂಗಡಿಯೊಳಗೆ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಗಾಜಿನ ಕವಚಗಳನ್ನು ಒಡೆದು ಹೊರಗೆ ಹಾರಿ ಸುಮಾರು 30 ರಿಂದ 35 ಅಡಿ ಎತ್ತರದಿಂದ ಕೆಳಕ್ಕೆ ಜಿಗಿದಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಗ್ಯಾಲಕ್ಸಿ ಕಮರ್ಷಿಯಲ್ ಪ್ಲಾಜಾದ ಮೂರನೇ ಮಹಡಿಯಲ್ಲಿರುವ ಫೋಟೋ/ವಿಡಿಯೋ ಸ್ಟುಡಿಯೋದಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಒಟ್ಟು ಐದು ಜನರು ಅಪಾಯಕ್ಕೆ ಸಿಲುಕಿದ್ದರು. ಇಬ್ಬರು ಅವಸರದಲ್ಲಿ ಕಟ್ಟಡದಿಂದ ಜಿಗಿದರೆ, ಇತರ ಮೂವರನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ‘‘ ಎಂದು ಹೆಚ್ಚುವರಿ ಡಿಸಿಪಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ.
ಕಟ್ಟಡದ ಮೇಲಿಂದ ಜಿಗಿದ ಇಬ್ಬರಿಗೆ ಸಣ್ಣಪುಟ್ಟ ಗಾಯ : "ಮೇಲಿನಿಂದ ಬೀಳುವ ಮೊದಲು, ಪುರುಷ ಮತ್ತು ಮಹಿಳೆ ಕಟ್ಟಡದಿಂದ ನೇತಾಡುತ್ತಿರುವುದು ಕಂಡು ಬಂದಿದೆ. ಈ ನಡುವೆ, ಕೆಲವು ಸ್ಥಳೀಯರು ಹತ್ತಿರದ ಹಾಸಿಗೆ ಅಂಗಡಿಯನ್ನು ಕಂಡು ಶೀಘ್ರವಾಗಿ ಒಂದೆರಡು ತಂದು ನೆಲಕ್ಕೆ ಹರಡಿದ್ದಾರೆ. ಮೇಲಿಂದ ಇಬ್ಬರೂ ಜಿಗಿದಾಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತವೊಂದನ್ನು ತಪ್ಪಿಸಲಾಗಿದೆ" ಎಂದು ರಕ್ಷಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಿದ ದೀಕ್ಷಿತ್ ಹೇಳಿದರು. ಘಟನೆ ನಡೆದ ಒಂದು ಗಂಟೆಯಲ್ಲೇ ಬೆಂಕಿಯನ್ನು ನಂದಿಸಲಾಯಿತು ಮತ್ತು ಎಲ್ಲಾ ಐದು ಜನರನ್ನು ರಕ್ಷಿಸಿ, ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ಇದೇ ರೀತಿಯ ಘಟನೆಯಲ್ಲಿ, ವಿದ್ಯಾರ್ಥಿಗಳು ಉರಿಯುತ್ತಿರುವ ಕೋಚಿಂಗ್ ಸೆಂಟರ್‌ನಿಂದ ಹೊರಗೆ ಜಿಗಿದಿರುವುದು ಕಂಡುಬಂದಿತ್ತು. ಜೂನ್ 15 ರಂದು ದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿ ಆ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಕಿಟಕಿಗಳಿಂದ ಜಿಗಿಯುತ್ತಿರುವುದನ್ನು ಸ್ಥಳೀಯರು ಸೆರೆ ಹಿಡಿದಿದ್ದರು. ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು,ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ:Fire Breaks Out: ಬಟ್ಟೆ ಅಂಗಡಿಗೆ ಬೆಂಕಿ, ಹೊತ್ತಿ ಉರಿದ ಪೀಠೋಪಕರಣಗಳ ಗೋದಾಮು