ನವದೆಹಲಿ : ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಮನವಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಇಂದು ಒಂದು ಗಂಟೆಗಳ ಕಾಲ ಶ್ರಮದಾನದಲ್ಲಿ ಭಾಗವಹಿಸಿದರು.
"ಮನ್ ಕಿ ಬಾತ್" 105 ನೇ ಸಂಚಿಕೆಯಲ್ಲಿ ಪಿಎಂ ಮೋದಿಯವರು ಅಕ್ಟೋಬರ್ 1 ರಂದು ಎಲ್ಲಾ ನಾಗರಿಕರು "ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ" ಮಾಡಿ ಎಂದು ಮನವಿ ಮಾಡಿದ್ದರು. ಇದು ಮಹಾತ್ಮ ಗಾಂಧಿಯವರ ಜನ್ಮದಿನದ ಮುನ್ನಾದಿನದಂದು ನಡೆಯುವ "ಸ್ವಚ್ಛಾಂಜಲಿ" ಎಂದು ಹೇಳಿದ್ದರು. ಜೊತೆಗೆ, ಈ ಅಭಿಯಾನವನ್ನು ‘ಏಕ್ ತಾರೀಖ್, ಏಕ್ ಗಂಟಾ, ಏಕ್ ಸಾಥ್’ ಎಂದು ಕರೆದಿದ್ದರು.
ದೇಶಾದ್ಯಂತ ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಪೊರಕೆ ಹಿಡಿದು ‘ಸ್ವಚ್ಛತಾ ಹಿ ಸೇವಾ’ ಅಭಿಯಾನದಲ್ಲಿ ಭಾಗಿಯಾದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೊರಕೆ ಹಿಡಿದು ಅಹಮದಾಬಾದ್‌ನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಕೂಡ ದೆಹಲಿಯ ಝಾಂಡೇವಾಲನ್ ಪ್ರದೇಶದಲ್ಲಿ ನಡೆದ ಅಭಿಯಾನದಲ್ಲಿ ಭಾಗವಹಿಸಿದ್ದರು.
ಶ್ರಮದಾನದಲ್ಲಿ ಭಾಗವಹಿಸಿದ ಕೇಂದ್ರ ವಿದ್ಯುತ್ ಸಚಿವ ಆರ್‌ಕೆ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ, "ನಾವು (ಕೇಂದ್ರ) ದೇಶವನ್ನು ಸ್ವಚ್ಛ ಮಾಡಲು ಸಂಕಲ್ಪ ಮಾಡಿದ್ದೇವೆ. ಇದು ದೊಡ್ಡ ಸವಾಲಾಗಿದ್ದು, ನಾವು ಅದನ್ನು ಮಾಡೇ ಮಾಡುತ್ತೇವೆ" ಎಂದು ಭರವಸೆ ವ್ಯಕ್ತಪಡಿಸಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಹಮದಾಬಾದ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಹಾಗೆಯೇ, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ನವದೆಹಲಿಯಲ್ಲಿ ನಡೆದ ಸ್ವಚ್ಛತಾ ಚಟುವಟಿಕೆಯಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡರು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ ರಾಷ್ಟ್ರ ರಾಜಧಾನಿಯಾದ್ಯಂತ 500 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರು ಸಹ "ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್"ಗೆ ಎಲ್ಲರೂ ಬೆಂಬಲ ನೀಡಿ ಸ್ವಚ್ಛತೆಯ ಕಡೆಗೆ ಸಾಗುವ ಸಂಕಲ್ಪ ಮಾಡೋಣವೆಂದು ಜನರಿಗೆ ಮನವಿ ಮಾಡಿದರು. ಇನ್ನು ಲಕ್ನೋದಲ್ಲಿ ನಡೆದ 'ಸ್ವಚ್ಛತಾ ಪಖ್ವಾಡಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಪ್ರಧಾನಿಯವರ ಮನವಿಯ ಮೇರೆಗೆ ದೇಶಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದರು. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ 'ಬನ್ನಿ, ಹೊಸ ಇತಿಹಾಸವನ್ನು ರಚಿಸೋಣ' ಎಂದು ಅಂದೋಲನದಲ್ಲಿ ಭಾಗಿಯಾಗುವಂತೆ ಜನರನ್ನು ಒತ್ತಾಯಿಸಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ, ಸ್ವಚ್ಛತಾ ಅಭಿಯಾನದಲ್ಲಿ ಎನ್‌ಜಿಒಗಳು, ಮಾರುಕಟ್ಟೆ ಸಂಘಗಳು, ಸ್ವ-ಸಹಾಯ ಗುಂಪುಗಳು, ವ್ಯಾಪಾರ ಸಂಸ್ಥೆಗಳು ಮತ್ತು ಖಾಸಗಿ ವಲಯದ ಕಂಪನಿಗಳು ಭಾಗಿಯಾಗಿದ್ದವು. ಒಟ್ಟು 22,000 ಕ್ಕೂ ಹೆಚ್ಚು ಮಾರುಕಟ್ಟೆ ಪ್ರದೇಶಗಳು, 10,000 ಜಲಮೂಲಗಳು, 7,000 ಬಸ್ ನಿಲ್ದಾಣಗಳು/ಟೋಲ್ ಪ್ಲಾಜಾಗಳು, 1,000 ಗೋಶಾಲೆಗಳು, 300 ಮೃಗಾಲಯಗಳು ಮತ್ತು ವನ್ಯಜೀವಿ ಪ್ರದೇಶಗಳು ಸೇರಿದಂತೆ ಗ್ರಾಮೀಣ ಮತ್ತು ನಗರದ ವಿವಿಧ ಸ್ಥಳಗಳಲ್ಲಿ ಶ್ರಮದಾನ ಮಾಡಲಾಗಿದೆ.
ಇದನ್ನೂ ಓದಿ :ಗಾಂಧಿ ಜಯಂತಿಗೂ ಮುನ್ನ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಲಿರುವ ಪ್ರಧಾನಿ ಮೋದಿ..