ಕರ್ನಾಟಕ

karnataka

ETV Bharat / bharat

ಪ್ರಿ-ರಿಲೀಸ್​ ಕಾರ್ಯಕ್ರಮದಲ್ಲಿ ಆಂಧ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ಪವನ್ ಕಲ್ಯಾಣ್

ರಾಜಕಾರಣಿಗಳಂತೆ ಚಲನಚಿತ್ರ ತಾರೆಯರು ಸುಲಭವಾಗಿ ಯಾವುದೇ ಹಣವನ್ನು ಪಡೆಯುತ್ತಿಲ್ಲ. ನಾವು ಹಗಲಿರುಳು ಶ್ರಮವಹಿಸಿ ಮಾತ್ರ ಹಣ ಸಂಪಾದಿಸುತ್ತಿದ್ದೇವೆ ಎಂದು ಆಂಧ್ರಪ್ರದೇಶದ ಜಗನ್​ ಮೋಹನ್​ ರೆಡ್ಡಿ ಸರ್ಕಾರದ ವಿರುದ್ಧ ನಟ ಪವನ್ ಕಲ್ಯಾಣ್ ಆಕ್ರೋಶ ವ್ಯಕ್ತಪಡಿಸಿದರು.

ಪವನ್ ಕಲ್ಯಾಣ್
ಪವನ್ ಕಲ್ಯಾಣ್

By

Published : Sep 26, 2021, 5:40 PM IST

ಹೈದರಾಬಾದ್​:ತಮ್ಮ ಸೋದರಳಿಯ ನಟ ಸಾಯಿ ಧರಂ ತೇಜ್​ರ 'ರಿಪಬ್ಲಿಕ್' ಸಿನಿಮಾದ ​ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ತೆಲುಗು ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಆಂಧ್ರಪ್ರದೇಶದ ಜಗನ್​ ಮೋಹನ್​ ರೆಡ್ಡಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರು ತಮ್ಮ ಕೋಪದ ವ್ಯಕ್ತಿತ್ವಕ್ಕೂ ಪ್ರಸಿದ್ಧಿ ಪಡೆದವರಾಗಿದ್ದಾರೆ. ಸಿಟ್ಟು ಬಂದಾಗೆಲ್ಲಾ ಮನಸ್ಸಲ್ಲಿರುವ ಮಾತೆಲ್ಲಾ ಹೊರಹಾಕಿ ಬಿಡುತ್ತಾರೆ. 'ರಿಪಬ್ಲಿಕ್' ಚಿತ್ರದ ಪ್ರಿ-ರಿಲೀಸ್ ಈವೆಂಟ್‌​ನಲ್ಲೂ ಆಗಿದ್ದು ಅದೇ. ತಮ್ಮ ಒಂದು ಗಂಟೆಯ ಸುದೀರ್ಘ ಭಾಷಣದಲ್ಲಿ ಆಂಧ್ರಪ್ರದೇಶದ ಪ್ರಸ್ತುತ ಸರ್ಕಾರದಿಂದ ಉಂಟಾದ ರಾಜಕೀಯ ಮತ್ತು ಮನರಂಜನಾ ಕ್ಷೇತ್ರದ ಮೇಲಾದ ಪರಿಣಾಮದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಚಲನಚಿತ್ರೋದ್ಯಮವನ್ನು ಲೂಟಿ ಮಾಡಲು ಹೊಸ ಅರ್ಥಹೀನ ಆದೇಶಗಳನ್ನು ಆಂಧ್ರ ಸರ್ಕಾರ ತರುತ್ತಿದೆ. ಕೋವಿಡ್​ ಸಾಂಕ್ರಾಮಿಕದ ವೇಳೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದಕ್ಕೆ, ಟಿಕೆಟ್​ ದರಗಳನ್ನು ಕಡಿಮೆ ಮಾಡಿದ್ದಕ್ಕೆ ತೆಲುಗು ಚಿತ್ರರಂಗವು ಸರ್ಕಾರದೊಂದಿಗೆ ಅಸಮಾಧಾನ ಹೊಂದಿದೆ ಎಂದರು.

ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಟಾಲಿವುಡ್​​​ ನಟ ಸಾಯಿ ಧರಂ ತೇಜ್​​ಗೆ ಗಾಯ: ಕತ್ತಿನ ಮೂಳೆ ಮುರಿತ..CCTV VIDEO

ರಾಜಕಾರಣಿಗಳಂತೆ ಚಲನಚಿತ್ರ ತಾರೆಯರು ಸುಲಭವಾಗಿ ಯಾವುದೇ ಹಣವನ್ನು ಪಡೆಯುತ್ತಿಲ್ಲ. ನಾವು ಹಗಲಿರುಳು ಶ್ರಮವಹಿಸಿ ಮಾತ್ರ ಹಣ ಸಂಪಾದಿಸುತ್ತಿದ್ದೇವೆ. 'ಬಾಹುಬಲಿ' ತುಂಬಾ ಹಣವನ್ನು ಗಳಿಸಿದ್ದರೆ ಅದು ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಅಷ್ಟು ವರ್ಷಗಳ ಕಾಲ ಅದರ ನಿರ್ಮಾಣದಲ್ಲಿ ತೊಡಗಿದ್ದವರ ಕಠಿಣ ಪರಿಶ್ರಮದಿಂದ ಸಾಧ್ಯವಾಯಿತು. ಜೂನಿಯರ್ ಎನ್​ಟಿಆರ್ ಅವರ ಸಿನಿಮಾಗಳು ಉತ್ತಮ ಕಲೆಕ್ಷನ್ ಗಳಿಸಿದ್ದರೆ ಅದು ಅವರ ಅದ್ಭುತ ಪ್ರತಿಭೆಯಿಂದ. ನಾವು ಈಗಾಗಲೇ ತೆರಿಗೆ ಪಾವತಿ ಮಾಡುತ್ತಿರುವಾಗ ಮನರಂಜನಾ ಉದ್ಯಮದಲ್ಲಿ ಖಾಸಗಿ ಹೂಡಿಕೆಯನ್ನು ಈ ಸರ್ಕಾರ ಏಕೆ ನಿಯಂತ್ರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ನನ್ನನ್ನು ಪವರ್​ ಸ್ಟಾರ್​ ಎಂದು ಕರೆಯಬೇಡಿ..'

ಕಳೆದೆರಡು ದಶಕಗಳಿಂದ 'ಪವರ್‌ಸ್ಟಾರ್' ಎಂಬ ಬಿರುದು ಪಡೆದಿರುವ ಪವನ್ ಕಲ್ಯಾಣ್​ರನ್ನು​ ರಾಜಕೀಯ ಪಕ್ಷ ಸ್ಥಾಪಿಸಿದ ಮೇಲೆ ಅಭಿಮಾನಿಗಳು 'ಸಿಎಂ' ಎಂದು ಕರೆಯಲೂ ಪ್ರಾರಂಭಿಸಿದ್ದಾರೆ. ಆದರೆ ನಿನ್ನೆ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಪವರ್‌ಸ್ಟಾರ್-ಸಿಎಂ ಎಂದು ಕರೆಯಲು ಆರಂಭಿಸಿದಾಗ ನಟ ಕೋಪಗೊಂಡಂತೆ ಕಾಣುತ್ತದೆ. ನನ್ನ ಬಳಿ ಅಷ್ಟೊಂದು ಪವರ್ ಇಲ್ಲದಿರುವಾಗ ನನ್ನನ್ನು ಪವರ್​ ಸ್ಟಾರ್​ ಎಂದು ಕರೆಯುವುದರಲ್ಲಿ ಅರ್ಥವಿದೆಯೇ? ನಾನಿಲ್ಲಿ ನಿಮ್ಮಿಂದ 'ಸಿಎಂ' ಅಥವಾ 'ಪವರ್‌ಸ್ಟಾರ್' ಎಂದು ಕರೆಯಿಸಿಕೊಳ್ಳಲು ಬಂದಿಲ್ಲ, ಸಾಯಿ ತೇಜ್ ಮತ್ತು ಅವರ ಸಿನಿಮಾ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದರು.

'ಸಾಯಿ ಧರಂ ತೇಜ್ ಇನ್ನೂ ಕೋಮಾದಲ್ಲಿದ್ದಾರೆ'

ನಾನು ಸಾಮಾನ್ಯವಾಗಿ ನನ್ನ ಅಳಿಯಂದಿರ ಸಿನಿಮಾ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಅವರು ಸ್ವತಂತ್ರರಾಗಿ ಖ್ಯಾತಿ ಪಡೆಯಲಿ ಎಂದೇ ಬಯಸುತ್ತೇನೆ. ರಸ್ತೆ ಅಪಘಾತಕ್ಕೊಳಗಾಗಿ ಸಾಯಿ ಧರಂ ತೇಜ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ನಾನು ಬಂದಿದ್ದೇನೆ. ಧರಂ ತೇಜ್ ಇನ್ನೂ ಕೋಮಾ ಸ್ಥಿತಿಯಲ್ಲಿಯೇ ಇದ್ದಾರೆ ಎಂದು ಪವನ್ ಕಲ್ಯಾಣ್ ಹೇಳಿದರು.

ABOUT THE AUTHOR

...view details