ನವದೆಹಲಿ:ಅಂತಾರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಪಂಡೋರಾ ಪೇಪರ್ಸ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ತನ್ನ ಪತಿ ಹೊಂದಿರುವ ಕಂಪನಿ ಬಗ್ಗೆ ತಪ್ಪಾಗಿ ಬಿಂಬಿಸಲಾಗಿದೆ. ಆ ಕಂಪನಿ ನಂಬಿಕಾರ್ಹ ಮತ್ತು ಕಾನೂನು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಪಂಡೋರಾ ಪೇಪರ್ಸ್ ಕುರಿತಂತೆ ಟ್ವೀಟ್ ಮಾಡಿರುವ ಶಾ, ಭಾರತದಿಂದ ಹೊರಗಿರುವ ಪತಿ ಜಾನ್ ಶಾ ಅವರ ಟ್ರಸ್ಟ್ ಬಗ್ಗೆ ಪಂಡೋರಾ ಪೇಪರ್ಸ್ನ ವರದಿಗಳು ತಪ್ಪಾಗಿ ಬಿಂಬಿಸಿವೆ. ಈ ವರದಿಗಳಲ್ಲಿ ಹೇಳಿರುವಂತೆ ಭಾರತೀಯರು ಯಾರೂ ಈ ಟ್ರಸ್ಟ್ ಅನ್ನು ನಿಯಂತ್ರಿಸುತ್ತಿಲ್ಲ. ಇದು ನ್ಯಾಯ ಸಮ್ಮತವಾಗಿದೆ ಮತ್ತು ಸ್ವತಂತ್ರ ಟ್ರಸ್ಟಿಗಳಿಂದ ನಿರ್ವಹಿಸುತ್ತಿರುವ ಕಂಪನಿ ಆಗಿದೆ ಎಂದಿದ್ದಾರೆ.
ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಕಿರಣ್ ಮಜುಂದಾರ್ ಶಾ, "ನನ್ನ ಪತಿ, ಜಾನ್ ಶಾ ಇಂಗ್ಲೆಂಡ್ ಪ್ರಜೆಯಾಗಿದ್ದು, ಅವರ ವಿದೇಶಿ ಕರೆನ್ಸಿ ಗಳಿಕೆಯಿಂದಾಗಿ 1999ರಲ್ಲಿ ಯುನಿಲಿವರ್ ಕಂಪನಿ ಷೇರುಗಳನ್ನು ಖರೀದಿಸಲು ಇತರ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಗ್ಲೆನ್ಟೆಕ್ ಇಂಟರ್‌ನ್ಯಾಷನಲ್ ಕಂಪನಿಯನ್ನು ಸ್ಥಾಪಿಸಿದ್ದರು" ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ಲೆನ್ಟೆಕ್ ಮಾರಿಷಸ್‌ನಲ್ಲಿ ನೋಂದಾಯಿತ ಘಟಕವಾಗಿದ್ದು, ಈ ಕುರಿತು ಆರ್‌ಬಿಐ ಮತ್ತು ಸೆಬಿ ಎರಡಕ್ಕೂ ಮಾಹಿತಿ ನೀಡಲಾಗಿದೆ. 2004ರಲ್ಲಿ ಬಯೋಕಾನ್ ಸಾರ್ವಜನಿಕ ಪಟ್ಟಿಯ ಕಂಪನಿಯಾದ ನಂತರ ಗ್ಲೆನ್ಟೆಕ್ ಬಯೋಕಾನ್ನಲ್ಲಿ ಹೊಂದಿರುವ ಷೇರುಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿತ್ತು. ಬಯೋಕಾನ್ ಲಿಮಿಟೆಡ್ನಲ್ಲಿ ಗ್ಲೆನ್ಟೆಕ್ ಶೇ 19.76ರಷ್ಟು ಪಾಲುದಾರಿಕೆ ಹೊಂದಿದೆ ಎಂದು ಕಿರಣ್ ಮಜುಂದಾರ್ ಮಾಹಿತಿ ನೀಡಿದ್ದಾರೆ.