ಅಮೃತಸರ(ಪಂಜಾಬ್): ಭಾರತೀಯ ಯುವಕನನ್ನು ಮದುವೆಯಾಗುವ ಉದ್ದೇಶದಿಂದ ಪಾಕಿಸ್ತಾನದ 21 ವರ್ಷದ ಯುವತಿ ಭಾರತಕ್ಕೆ ಆಗಮಿಸಿದ್ದಾರೆ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಗೆ ಆಕೆ ಬಂದಿದ್ದಾರೆ. ಭಾರತದ ವೀಸಾ ಪಡೆದು ಕರಾಚಿ ಮೂಲದ ಯುವತಿ ಪಂಜಾಬ್ನ ಅಟ್ಟಾರಿ-ವಾಘಾ ಗಡಿ ಮೂಲಕ ಪ್ರವೇಶಿಸಿದ್ದಾರೆ. ಭಾವಿ ಪತಿ ಹಾಗೂ ಅತ್ತೆ, ಮಾವ ಈಕೆಯನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ.
ಕರಾಚಿ ನಿವಾಸಿ ಜವಾರಿಯಾ ಖಾನಂ ಹಾಗೂ ಕೋಲ್ಕತ್ತಾದ ಸಮೀರ್ ಖಾನ್ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ. ಭಾರತದ ಗಡಿ ಪ್ರವೇಶಿಸಿದ ಜವಾರಿಯಾ ಖಾನಂ ಅವರನ್ನು ವಾದ್ಯಮೇಳಗಳೊಂದಿಗೆ ಭಾವಿ ಪತಿ ಹಾಗೂ ಆತನ ಮನೆಯವರು ಸ್ವಾಗತಿಸಿದರು. ಬಳಿಕ ಅಲ್ಲಿಂದ ಶ್ರೀಗುರು ರಾಮದಾಸ್ ಅಂತರರಾಷ್ಟ್ರೀಯ ಏರ್ಪೋರ್ಟ್ನಿಂದ ಎಲ್ಲರೂ ಕೋಲ್ಕತ್ತಾದ ವಿಮಾನ ಹತ್ತಿದರು. ಜವಾರಿಯಾ ಅವರಿಗೆ ಭಾರತ ಸರ್ಕಾರ 45 ದಿನಗಳ ವೀಸಾ ವಿತರಿಸಿದೆ.
ಇದಕ್ಕೂ ಮುನ್ನ ಸಮೀರ್ ಖಾನ್ ತಂದೆ ಯೂಸುಫ್ಝೈ ಮಾತನಾಡಿ, ಕೆಲವೇ ದಿನಗಳಲ್ಲಿ ಜವಾರಿಯಾ ಮತ್ತು ಸಮೀರ್ ವಿವಾಹ ಸಮಾರಂಭ ನಡೆಯಲಿದೆ. ಇದರ ನಂತರ ನಾವು ಜವಾರಿಯಾ ವೀಸಾ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ನಮ್ಮೊಂದಿಗೆ ವಾಸಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ವೀಸಾ ಅವಧಿ ವಿಸ್ತರಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಸೌದಿಯಲ್ಲಿ ಗಂಡ.. ಪಬ್ಜಿ ಗೇಮ್ ಪ್ರಿಯಕರನಿಗಾಗಿ ನಿವೇಶನ ಮಾರಿ ಭಾರತಕ್ಕೆ ಬಂದ ಪಾಕ್ ಮಹಿಳೆ ಪೊಲೀಸರ ಅತಿಥಿ!
5.6 ವರ್ಷದ ಪ್ರಯತ್ನದ ನಂತರ ವೀಸಾ ಲಭ್ಯ:ಜವಾರಿಯಾ ಮಾತನಾಡಿ, ಐದೂವರೆ ವರ್ಷಗಳ ಪ್ರಯತ್ನದ ನಂತರ ನನಗೆ ವೀಸಾ ಸಿಕ್ಕಿದೆ. ತುಂಬಾ ಸಂತೋಷವಾಗಿದೆ. ನಾನು ಭಾರತಕ್ಕೆ ಬರುತ್ತೇನೆ ಎಂದು ಭಾವಿಸಿರಲಿಲ್ಲ. ಭಾರತ ಸರ್ಕಾರವು ನನಗೆ 45 ದಿನಗಳು ವೀಸಾ ವಿತರಣೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂದುವರೆದು, ಕೋಲ್ಕತ್ತಾದಲ್ಲಿ ಜನವರಿ ಮೊದಲ ವಾರದಲ್ಲಿ ನಾನು ಸಮೀರ್ ಅವರನ್ನು ವರಿಸಲಿದ್ದೇನೆ. ಇದರಿಂದ ಪಾಕಿಸ್ತಾನದಲ್ಲಿ ನಮ್ಮ ಮನೆಯಲ್ಲೂ ಸಂತೋಷವಾಗಿದೆ. ಐದುಗಳ ವರ್ಷಗಳ ಕಾಯುವಿಕೆ ಅಂತ್ಯವಾಗಿದೆ ಎಂದರು.
ಸಮೀರ್ ಪ್ರತಿಕ್ರಿಯಿಸಿ, ಈ ಹಿಂದೆ ಎರಡು ಬಾರಿ ಜವಾರಿಯಾ ಖಾನಂ ವೀಸಾ ತಿರಸ್ಕಾರಗೊಂಡಿತ್ತು. ಇದೀಗ ವೀಸಾ ನೀಡುವ ಮೂಲಕ ಎರಡು ಕುಟುಂಬಗಳು ಒಂದಾಗಲು ಸಹಾಯ ಮಾಡಿರುವ ಭಾರತ ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇಂತಹ ಕ್ರಮಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಹದಗೆಟ್ಟ ಸಂಬಂಧ ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪಾಕ್ನಿಂದ ವಾಪಸ್ ಬಂದ ಅಂಜು:ಕಳೆದ ನಾಲ್ಕು ತಿಂಗಳ ಹಿಂದೆಭಾರತದ ಅಂಜು ಎಂಬ ವಿವಾಹಿತ ಮಹಿಳೆ ಪಾಕಿಸ್ತಾನಕ್ಕೆ ತೆರಳಿ ತನ್ನ ಫೇಸ್ಬುಕ್ ಗೆಳೆಯನ ವರಿಸಿದ್ದರು. ಆದರೆ, ಕೆಲ ದಿನಗಳ ಹಿಂದೆಯಷ್ಟೇ ಅಂಜು ವಾಘಾ ಗಡಿಯ ಮೂಲಕ ಆಕೆ ಭಾರತಕ್ಕೆ ವಾಪಸ್ ಬಂದಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನದ ಸೀಮಾ ಎಂಬ ವಿವಾಹಿತ ಮಹಿಳೆ ಭಾರತದ ತನ್ನ ಗೆಳೆಯನ ಹುಡುಕಿಕೊಂಡು ಇಲ್ಲಿಗೆ ಆಗಮಿಸಿ, ನೆಲೆಸಿದ್ದಾರೆ.
ಇದನ್ನೂ ಓದಿ:ಗೆಳೆಯನ ವಿವಾಹವಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಭಾರತದ ಮಹಿಳೆ ಅಂಜು ತಾಯ್ನಾಡಿಗೆ ವಾಪಸ್!