ದುಬೈ: ಐಸಿಸಿ ವಿಶ್ವಕಪ್ ಟೆಸ್ಟ್ ಚಾಂಪಿಯನ್ ಶಿಪ್ ನ ಎರಡನೇ ಆವೃತ್ತಿಯ ಫೈನಲ್ ಪಂದ್ಯವು ಜೂನ್ 7 ರಿಂದ 11 ರ ನಡುವೆ ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ದೃಢಪಡಿಸಿದೆ. ಜೂನ್ 12 ರಿಸರ್ವ ದಿನವಾಗಿರಲಿದೆ. 2021 ರಲ್ಲಿ ನಡೆದ ಪ್ರಥಮ ಟೆಸ್ಟ್ ವಿಶ್ವ ಕಪ್ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್ ಜಯಗಳಿಸಿತ್ತು. ಆಗ ನ್ಯೂಜಿಲ್ಯಾಂಡ್ ತಂಡವು ಭಾರತವನ್ನು 8 ವಿಕೆಟ್ಗಳಿಂದ ಸೋಲಿಸಿತ್ತು.
ಫೈನಲ್ ಪಂದ್ಯ ನಡೆಯಲಿರುವ ದಕ್ಷಿಣ ಲಂಡನ್ನಲ್ಲಿರುವ ಸ್ಥಳವು ಶ್ರೀಮಂತ ಇತಿಹಾಸ ಹೊಂದಿದ್ದು, 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಟೆಸ್ಟ್ ಕ್ಯಾಲೆಂಡರ್‌ನಲ್ಲಿ ಸ್ಮರಣೀಯ ಘಟನೆಯಾಗಿದೆ ಮತ್ತು ಇದು ಆಟದ ದೀರ್ಘ ಸ್ವರೂಪದ ಒಂದು ವಾರದ ಅವಧಿಯ ಪಂದ್ಯಾವಳಿಯಾಗಿದೆ. ಟೆಸ್ಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಈವರೆಗೆ 24 ಸರಣಿಗಳಲ್ಲಿ 61 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಫೈನಲ್ನಲ್ಲಿ ಆಡಲಿರುವ ಎರಡು ದೇಶಗಳು ಯಾವವು ಎಂಬುದು ಇನ್ನೂ ಗೊತ್ತಾಗಿಲ್ಲವಾದರೂ ಫೈನಲಿಸ್ಟ್‌ಗಳನ್ನು ನಿರ್ಧರಿಸಲು ಮುಂಬರುವ ವಾರಗಳಲ್ಲಿ ಸಾಕಷ್ಟು ಮಹತ್ವದ ಪಂದ್ಯಗಳು ನಡೆಯಲಿವೆ.
ಆಸ್ಟ್ರೇಲಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಫೆಬ್ರವರಿ 9 ರಿಂದ ನಾಲ್ಕು ಟೆಸ್ಟ್ ಸರಣಿಯಲ್ಲಿ ಆಡಲಿವೆ. ಒಟ್ಟು ಆರು ತಂಡಗಳು ಅರ್ಹತೆ ಪಡೆಯುವ ಅವಕಾಶವನ್ನು ಹೊಂದಿದ್ದರೂ, ಅಗ್ರ ಎರಡು ಸ್ಥಾನಗಳಿಗೆ ಸವಾಲು ಹಾಕುವ ಮುಂಚೂಣಿಯಲ್ಲಿರುವವರಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖವಾಗಿವೆ.