ನವದೆಹಲಿ:ಬಜೆಟ್ ಅಧಿವೇಶನದ 2ನೇ ಚರಣ ಇಂದಿನಿಂದ ಆರಂಭವಾಯಿತು. ತನಿಖಾ ಸಂಸ್ಥೆಗಳ ದುರ್ಬಳಕೆ, ಹಿಂಡನ್ಬರ್ಗ್ ವರದಿ, ಅದಾನಿ ಕುರಿತು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದ್ದಕ್ಕೆ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿತು. ತೀವ್ರ ಗಲಾಟೆ ಸೃಷ್ಟಿಯಾದ ಕಾರಣ ಸಭಾಧ್ಯಕ್ಷರು ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಬೆಳಗ್ಗೆ ಲೋಕಸಭೆ ಆರಂಭವಾದ ಸ್ವಲ್ಪ ಸಮಯದ ನಂತರ ಪ್ರತಿಪಕ್ಷ ನಾಯಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಈ ಮಧ್ಯೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷಗಳ ನಾಯಕರು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದರು. ಗದ್ದಲ ತೀವ್ರವಾದ ಕಾರಣ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ರಾಜ್ಯಸಭೆಯಲ್ಲೂ ಗದ್ದಲ:ಇನ್ನೊಂದೆಡೆ ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ ನಡೆಸಿದರು. ಸದನ ಆರಂಭವಾದ ತಕ್ಷಣವೇ ನಾಯಕರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದರು. ಅದಾನಿ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಗದ್ದಲ ತೀವ್ರವಾದ ಕಾರಣ ಸ್ಪೀಕರ್ ಜಗದೀಪ್ ಧನಕರ್ ಅವರು ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
ಬಜೆಟ್ ಮಂಡನೆ ಬಳಿಕ ಒಂದು ತಿಂಗಳ ವಿರಾಮದ ನಂತರ ದ್ವಿತೀಯಾರ್ಧದ ಬಜೆಟ್ ಅಧಿವೇಶನ ಪ್ರತಿಪಕ್ಷಗಳ ಪ್ರತಿಭಟನೆಯ ಮೂಲಕ ಪುನರಾರಂಭ ಕಂಡಿದೆ. ಬಜೆಟ್ ಅಧಿವೇಶನದ ಮೊದಲಾರ್ಧವು ಕೂಡ ಇದೇ ವಿಷಯಗಳಿಗಾಗಿ ಗದ್ದಲ, ಪ್ರತಿಭಟನೆಯಿಂದಾಗಿ ಹಲವು ಬಾರಿ ಮುಂದೂಡಿಕೆಯಾಗಿತ್ತು.
ಮೋದಿ ಸರ್ವಾಧಿಕಾರಿ:ಇನ್ನು ಸಂಸತ್ತಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಸಭೆ ಪ್ರತಿಪಕ್ಷಗಳ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವ ಇಲ್ಲವಾಗಿದೆ. ಅವರು ಸರ್ವಾಧಿಕಾರದ ರೀತಿಯಲ್ಲಿ ದೇಶವನ್ನು ನಡೆಸುತ್ತಿದ್ದಾರೆ. ನಂತರ ಅವರೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.