ನವದೆಹಲಿ:ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಒಂದು ರಾಷ್ಟ್ರ, ಒಂದು ಚುನಾವಣೆಗೆ ಇಂಡಿಯಾ ಮೈತ್ರಿಕೂಟ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಚುನಾವಣಾ ಚಾಣಕ್ಯ ಎಂದೇ ಹೆಸರಾದ ಪ್ರಶಾಂತ್ ಕಿಶೋರ್ ಉದ್ದೇಶ ಒಳ್ಳೆಯದಾಗಿದ್ದರೆ ಬೆಂಬಲ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಈ ಹಿಂದೆಯೂ ಇಂತಹ ಚುನಾವಣಾ ಪದ್ಧತಿ ಜಾರಿಯಲ್ಲಿತ್ತು. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಸಮಯ ಮತ್ತು ಹಣ ಉಳಿಸಬಹುದು. ಸರ್ಕಾರ 5 ವರ್ಷದ ಅಧಿಕಾರವಧಿಯಲ್ಲಿ ಪದೇ ಪದೆ ಚುನಾವಣೆಗಳನ್ನು ಎದುರಿಸುವ ಗೋಜಲು ತಪ್ಪಿ, ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಿದರು.
ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಇದು ಸಾಧುವೇ ಎಂಬುದನ್ನು ಪರಿಶೀಲಿಸಬೇಕು. ದೇಶದ ಶೇಕಡಾ 25 ರಷ್ಟು ಜನರು ಪ್ರತಿವರ್ಷ ಚುನಾವಣೆಯಲ್ಲಿ ಮತದಾನ ಮಾಡುತ್ತಲೇ ಇರುತ್ತಾರೆ. ಸರ್ಕಾರಗಳು ಕೂಡ 5 ವರ್ಷದಲ್ಲಿ ಹಲವು ಬಾರಿ ಚುನಾವಣೆಗಳನ್ನು ಎದುರಿಸುತ್ತವೆ. ಇದರ ಬದಲಿಗೆ 1 ಅಥವಾದ 2 ಬಾರಿ ಚುನಾವಣೆ ನಡೆಸಿದರೆ ಉತ್ತಮ. ಇದು ವೆಚ್ಚ ತಗ್ಗಿಸುವುದರ ಜೊತೆಗೆ ಜನರು ಒಂದೇ ಬಾರಿಗೆ ಯಾವ ಸರ್ಕಾರ ಬೇಕೆಂಬುದನ್ನು ನಿರ್ಧರಿಸಲು ಅವಕಾಶ ಸಿಗಲಿದೆ ಎಂದು ಹೇಳಿದರು.
ಏಕಾಏಕಿ ಪರಿವರ್ತನೆ ತರಲು ಸಾಧ್ಯವಿಲ್ಲ. ಇದರಿಂದ ಸಮಸ್ಯೆಗಳೇ ಹೆಚ್ಚಾಗುತ್ತವೆ. ಸರ್ಕಾರ ಒಂದೇ ಬಾರಿಗೆ ಚುನಾವಣೆ ನಡೆಸುವ ಮಸೂದೆ ತರುತ್ತಿದೆ. ಅದು ಮೊದಲು ಜಾರಿಗೆ ಬರಲಿ. ಇದನ್ನು ಸರ್ಕಾರ ಒಳ್ಳೆಯ ಉದ್ದೇಶದಿಂದ ತಂದಿದ್ದೇ ಆದಲ್ಲಿ, ದೇಶಕ್ಕೆ ಒಳಿತಾಗುತ್ತದೆ ಎಂದರೆ ಬೆಂಬಲ ನೀಡೋಣ. ಆದರೆ, ಸರ್ಕಾರವು ಯಾವ ಉದ್ದೇಶದಿಂದ ಅದನ್ನು ತರುತ್ತಿದೆ ಎಂಬುದರ ಮೇಲೆ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ ಎಂದು ಹೇಳಿದರು.
ಮೂರು ತಿಂಗಳಿಗೊಮ್ಮೆ ಎಲೆಕ್ಷನ್ ನಡೆಯಲಿ:ಒಂದು ರಾಷ್ಟ್ರ ಒಂದು ಚುನಾವಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೂರು ತಿಂಗಳಿಗೊಮ್ಮೆ ಚುನಾವಣೆಗಳು ನಡೆಯಬೇಕು. ರಾಜಕಾರಣಿಗಳು ಜನರ ಜೊತೆಗೆ ಸಂಪರ್ಕ ಹೊಂದಿರಬೇಕು ಎಂದು ಹೇಳಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಒಂಬತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ನಂತರವೂ ನರೇಂದ್ರ ಮೋದಿ ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಎಂದು ಮತ ಕೇಳುತ್ತಿದ್ದಾರೆ. ಇದು ನನಗೆ ಬೇಸರ ತಂದಿದೆ. ಒಂದು ರಾಷ್ಟ್ರ ಸಾವಿರ ಚುನಾವಣೆಗಳು ನಡೆದರೆ, ಅದಕ್ಕೂ ನಮಗೇನು ಸಂಬಂಧ. ಅದರಿಂದ ನಿಮಗೇನು ಸಿಗುತ್ತದೆ. ಕೇಂದ್ರ ಸರ್ಕಾರ ಇಂತಹ ಪ್ರಸ್ತಾವನೆ ತಂದಿದೆ ಎಂದರೆ ಏನೂ ಅಭಿವೃದ್ಧಿ ಮಾಡಿಲ್ಲ ಎಂದರ್ಥ ಎಂದು ಟೀಕಿಸಿದ್ದಾರೆ.
ದೇಶದಲ್ಲಿ ಒಂದು ಚುನಾವಣೆಯಲ್ಲ, ಒಂದು ರಾಷ್ಟ್ರ, ಒಂದು ಚಿಕಿತ್ಸೆ, ಒಂದೇ ಶಿಕ್ಷಣ ಸಿಗಬೇಕು. ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದರೆ, ಮೋದಿ ಅವರು ನಿಮ್ಮ ಬಳಿಗೆ ಬರುವುದಿಲ್ಲ. ಬದಲಿಗೆ ಮೂರು, ಆರು ತಿಂಗಳಿಗೊಮ್ಮೆ ನಡೆದರೆ ಅವರು ನಿಮ್ಮಲ್ಲಿಗೆ ಬಂದು ಮತ ಕೇಳಬೇಕು. ಅದಕ್ಕೆ ತೊಂದರೆಯಾಗುತ್ತದೆ ಎಂದು ಇಂತಹ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಓಮರ್ ಅಬ್ದುಲ್ಲಾ ಪ್ರತಿಕ್ರಿಯೆ:ಒಂದು ರಾಷ್ಟ್ರ, ಒಂದು ಚುನಾವಣೆಯ ಕುರಿತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಮಾತನಾಡಿ, ಇದರ ಹಿಂದಿನ ಉದ್ದೇಶ ಚುನಾವಣೆ ಪ್ರಕ್ರಿಯೆಯನ್ನು ಸರಳೀಕರಣ ಮಾಡುವುದಾಗಿದ್ದರೆ ಅದಕ್ಕೆ ಬೆಂಬಲವಿರಲಿದೆ. ಆದರೆ, ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಉದ್ದೇಶ ಹೊಂದಿದ್ದರೆ ಅದಕ್ಕೆ ನಮ್ಮ ಬೆಂಬಲವಿಲ್ಲ. ಮಸೂದೆ ಬಂದ ಬಳಿಕ ಅದರ ಸಾಧಕ ಬಾಧಕಗಳನ್ನು ನೋಡಿಕೊಂಡು ಮುಂದುವರಿಯೋಣ ಎಂದು ಹೇಳಿದರು.
ಇದನ್ನೂ ಓದಿ:One nation one election: ಒಂದು ರಾಷ್ಟ್ರ ಒಂದು ಚುನಾವಣೆ.. ಸಮಿತಿ ರಚಿಸಿದ ಮರುದಿನವೇ ಕೆಲಸ ಶುರು, ಸಭೆ ನಡೆಸಿ ಅಧ್ಯಕ್ಷ ಕೋವಿಂದ್ಗೆ ಮಾಹಿತಿ