ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್‌ಪಟು ನೀರಜ್ ಚೋಪ್ರಾ ತಮ್ಮ ಜೀವನದಲ್ಲಿ ನಡೆದ ಸಿಹಿಕಹಿ ಅನುಭವಗಳನ್ನು ಮೆಲುಕು ಹಾಕಿದ್ದಾರೆ. ಜನಪ್ರಿಯ ಟೀವಿ ಕಾರ್ಯಕ್ರಮ ಕೌನ್ ಬನೇಗಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾವಿನ ಭಯ ಉಂಟುಮಾಡಿದ ಸನ್ನಿವೇಶವನ್ನು ಅಮಿತಾಭ್ ಬಚ್ಚನ್ ಅವರ ಜೊತೆ ಹಂಚಿಕೊಂಡರು.
'ಸಾವಿಗೆ ಹತ್ತಿರವಾದ ಆ ಕ್ಷಣ..'ವನ್ನು ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ವಿವರಿಸಿದ ನೀರಜ್ ಚೋಪ್ರಾ
ಯುಎಇನ ಅಬುಧಾಬಿಯಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ವಿಮಾನದಲ್ಲಿ ಹೋಗುತ್ತಿದ್ದಾಗ ತಮಗೆ ಸಾವಿನ ಅನುಭವ ಆಗಿತ್ತು ಎಂದು ಚಿನ್ನದ ಹುಡುಗ ನೀರಜ್ ಚೋಪ್ರಾ ಜನಪ್ರಿಯ ಟಿವಿ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ವಿವರಿಸಿದರು.
'ಅಬುಧಾಬಿಯಿಂದ ಫ್ರಾಂಕ್‌ಫರ್ಟ್‌ಗೆ ಹೋಗುತ್ತಿದ್ದೆ. ವಿಮಾನ ಮೋಡಗಳ ನಡುವೆ ಕೆಲವು ಕ್ಷಣಗಳ ಕಾಲ ನಿಯಂತ್ರಣ ಕಳೆದುಕೊಂಡಿತು. ವಿಮಾನದೊಳಗೆ ಇದ್ದಕ್ಕಿದ್ದಂತೆ ಕತ್ತಲೆ ಆವರಿಸಿತು. ಇದೇ ವೇಳೆ, ವಿಮಾನ ವೇಗವಾಗಿ ಕೆಳಕ್ಕೆ ಧಾವಿಸಿ ಬುರುತ್ತಿತ್ತು. ಪ್ರಾಣಭಯದಿಂದ ಪ್ರಯಾಣಿಕರಲ್ಲಿ ಕೆಲವರು ಕಿರುಚುತ್ತಿದ್ದುದು ನನಗೆ ಕೇಳಿಸಿತು.'
ವಿಮಾನ ನಿಯಂತ್ರಣ ಕಳೆದುಕೊಂಡಿದ್ದ ವೇಳೆ ನಾನು ಕಿವಿಗೆ ಹೆಡ್ ಫೋನ್ ಹಾಕಿಕೊಂಡಿದ್ದೆ. ನಂತರ ಎಲ್ಲರ ಗದ್ದಲದಿಂದಾಗಿ ಹೆಡ್‌ಫೋನ್ ತೆಗೆಯುತ್ತಿದ್ದಂತೇ ಘಟನೆಯ ಬಗ್ಗೆ ತಿಳಿಯಿತು. 15 ಸೆಕೆಂಡುಗಳ ಕಾಲ ಸಾವಿನ ಸಮೀಪಕ್ಕೆ ಹೋಗಿದ್ದ ಅನುಭವ ಅದು. ಇಂತಹ ಅನುಭವವನ್ನು ನಾನು ಕಣ್ಣಾರೆ ಕಂಡೆ' ಎಂದು ಚೋಪ್ರಾ ಹೇಳಿದರು.