ಭುವನೇಶ್ವರ(ಒಡಿಶಾ):ಒಡಿಶಾದ ನಟಿ ಮೌಸುಮಿ ನಾಯಕ್ ಅವರನ್ನು ಇನ್ಫೋಸಿಟಿ ಪೊಲೀಸರು ಇಂದು ಬಂಧಿಸಿದ್ದಾರೆ. ಲೇಖಕಿಯೊಬ್ಬಳ ವರ್ಚಸ್ಸು ಮತ್ತು ಅವರಿಗಿರುವ ಪ್ರಸಿದ್ಧಿಯನ್ನು ಹಾಳುಗೆಡವಲು ಪ್ರಯತ್ನಿಸಿದ ಆರೋಪದ ಮೇಲೆ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖ್ಯಾತ ಬರಹಗಾರ್ತಿ ಬನಸ್ಮಿತಾ ಪತಿ ಅವರು ನಟಿ ಮೌಸುಮಿ ನಾಯಕ್ ವಿರುದ್ಧ ನನಗೆ ಕಿರುಕುಳ ನೀಡುತ್ತಿದ್ದು, ನನ್ನ ಜನಪ್ರಿಯತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾಳೆ ಎಂಬ ದೂರು ನೀಡಿದ್ದರು. ಈ ಹಿನ್ನೆಲೆ ಇನ್ಫೋಸಿಟಿ ಪೊಲೀಸರು ನಟಿ ಮೌಸುಮಿ ನಾಯಕ್ ಅವರನ್ನು ಬಂಧಿಸಿ, ನಟಿಯ ವಿರುದ್ಧ ಐಪಿಸಿ ಸೆಕ್ಷನ್ 385, 294, 506 ಮತ್ತು 507ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, ಬಂಧಿಸಲ್ಪಟ್ಟಿರುವ ನಟಿ ಮೌಸುಮಿ ನಾಯಕ್ ಮತ್ತು ಲೇಖಕಿ ಬನಸ್ಮಿತಾ ಪತಿ ನಡುವೆ ಯಾವುದೋ ಒಂದು ವ್ಯವಹಾರ ನಡೆದಿದ್ದು, ಲೇಖಕಿಗೆ ನಟಿ 5 ಲಕ್ಷದ 80 ಸಾವಿರ ಕೊಟ್ಟಿದ್ದರಂತೆ. ಈ ವಿಚಾರದಲ್ಲೆ ಇಬ್ಬರ ನಡುವೆ ಮನಸ್ತಾಪ ಜಗಳ ಉಂಟಾಗಿತ್ತು ಎನ್ನಲಾಗಿದೆ. ಆದರೆ, ಆ ಬಳಿಕ ಲೇಖಕಿ, ತಾವು ನಟಿ ಮೌಸಮಿ ಅವರಿಂದ ತೆಗೆದುಕೊಂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದರಂತೆ. ಅದಾದ ಮೇಲೂ ಲೇಖಕಿಗೆ ನಟಿ ಕಿರುಕುಳ ನೀಡಿ, ಸುಲಿಗೆ ಮಾಡಿದ್ದಾರಂತೆ. ಅಷ್ಟೇ ಅಲ್ಲ ಇದೇ ವಿಚಾರವಾಗಿ ಕಾಡಿಸಿದ್ದು, ತಮ್ಮ ಖ್ಯಾತಿಯನ್ನು ಋಣಾತ್ಮಕವಾಗಿ ಬಿಂಬಿಸುವಲ್ಲಿ ಯತ್ನಿಸಿದ್ದಾರೆ ಎಂದು ಲೇಖಕಿ ದೂರಿನಲ್ಲಿ ಆರೋಪಿಸಿದ್ದಾರೆ. ನಟಿ ವರ್ತನೆಯಿಂದ ಬೇಸತ್ತ ಲೇಖಕಿ ಇನ್ಫೋಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲೇಖಕಿ ಇನ್ಫೋಸಿಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ’’ನಟಿ ಮೌಸುಮಿ ನಾಯಕ್ ನನ್ನ ಕುಟುಂಬವನ್ನು ಸಾರ್ವಜನಿಕವಾಗಿ ಅಪಮಾನ ಮಾಡಿದ್ದಾರೆ. ಅವರ ಹಣವನ್ನು ನಾನು ಹಿಂದಿರುಗಿಸಿದ ಮೇಲೂ ತನಗೆ ಬೆದರಿಕೆ ಹಾಕಿದ್ದಲ್ಲದೇ, ಚಂದಕ ಪೊಲೀಸರಿಗೆ ತನ್ನ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಾರೆ. ಅಲ್ಲದೇ ಕೆಲ ಮಾಧ್ಯಮಗಳ ಮುಂದೆ ನಟಿ ಮೌಸುಮಿ ತನ್ನ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ಕೈಗೆತ್ತಿಕೊಂಡ ಇನ್ಫೋಸಿಟಿ ಠಾಣಾ ಪೊಲೀಸರು ಕೊನೆಗೂ ಮೌಸುಮಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಇಬ್ಬರೂ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದು, ತನಿಖೆ ನಂತರವೇ ಸತ್ಯಾಸತ್ಯತೆ ಹೊರಬರಬೇಕಿದೆ.
ಇದನ್ನೂ ಓದಿ:2 ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಬಹುದೊಡ್ಡ ಮೊತ್ತಕ್ಕೆ ಮಾರಿದ ನಟ ರಣ್ವೀರ್ ಸಿಂಗ್