ಚಂಡೀಗಢ(ಪಂಜಾಬ್):ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕಾರ ಮಾಡಿದಾಗಿನಿಂದಲೂ ಭಗವಂತ್ ಮಾನ್ ಸದಾ ಒಂದಿಲ್ಲೊಂದು ಮಹತ್ವದ ಆದೇಶ ಹೊರಡಿಸುತ್ತಿದ್ದು, ಇದೀಗ ನಕಲಿ ಪದವಿ, ಫೇಕ್ ದಾಖಲಾತಿ ಮೇಲೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಈಗಾಗಲೇ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿರುವ ಮಾನ್ ಇದೀಗ ನಕಲಿ ಪದವಿ, ಪ್ರಮಾಣ ಪತ್ರ ನೀಡಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡವರನ್ನು ಹುದ್ದೆಯಿಂದ ವಜಾಗೊಳಿಸಲು ಮುಂದಾಗಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಭಗವಂತ್ ಮಾನ್ ಟ್ವೀಟ್ ಮಾಡಿದ್ದು, ಅತ್ಯಂತ ಪ್ರಭಾವಿ ಮತ್ತು ರಾಜಕೀಯ ವ್ಯಕ್ತಿಗಳ ಸಂಬಂಧಿಕರು ನಕಲಿ ಪದವಿ ಪಡೆದುಕೊಂಡು, ಸರ್ಕಾರಿ ಉದ್ಯೋಗ ಪಡೆದುಕೊಂಡಿರುವ ಅನೇಕ ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಶೀಘ್ರದಲ್ಲೇ ಅವರನ್ನ ಕೆಲಸದಿಂದ ವಜಾಗೊಳಿಸಲಾಗುವುದು. ರಾಜ್ಯದಲ್ಲಿ ನಿರುದ್ಯೋಗದಿಂದ ಬಳಲುತ್ತಿರುವ ಅಭ್ಯರ್ಥಿಗಳಿಗೆ ಈ ಕೆಲಸ ದೊರೆಯಲಿವೆ ಎಂದಿದ್ದಾರೆ. ಈ ಮೂಲಕ ನಕಲಿ ಪದವಿ ಪಡೆದ ಸರ್ಕಾರಿ ಉದ್ಯೋಗಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಸ್ಪಷ್ಟವಾಗಿದೆ.