ಭುವನೇಶ್ವರ: ಪ್ರಸಿದ್ಧ ಶಾಸ್ತ್ರೀಯ ನರ್ತಕ ಕೇಲುಚರಣ್ ಮೊಹಾಪಾತ್ರ ಅವರ ಪತ್ನಿ ಖ್ಯಾತ ಒಡಿಸ್ಸಿ ನರ್ತಕಿ ಲಕ್ಷ್ಮಿಪ್ರಿಯ ಮೋಹಪಾತ್ರ(86) ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಇಂದು ತಿಳಿಸಿದ್ದಾರೆ.
ನಿನ್ನೆ ರಾತ್ರಿ 11.20ರ ಸುಮಾರಿಗೆ ಭುವನೇಶ್ವರದಲ್ಲಿರುವ ನಿವಾಸದಲ್ಲಿ ಮೋಹಪಾತ್ರ ನಿಧನರಾಗಿದ್ದಾರೆ. ಪುರಿಯ ಸ್ವರ್ಗದ್ವಾರ್ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
1947ರಲ್ಲಿ ಪುರಿಯ ಅನ್ನಪೂರ್ಣ ರಂಗಮಂದಿರದಲ್ಲಿ ಲಕ್ಷ್ಮಿಪ್ರಿಯ ಮೋಹಪಾತ್ರ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ನೃತ್ಯ ವೃತ್ತಿ ಜೀವನ ಪ್ರಾರಂಭಿಸಿದ್ದರು. ನಂತರ ಕೇಲುಚರಣ್ ಮೋಹಪಾತ್ರ ಅವರ ಪರಿಚಯವಾಯಿತು. ಲಕ್ಷ್ಮಿಪ್ರಿಯ ಅವರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯ ಪ್ರಕಾರಗಳಲ್ಲಿ ಪರಿಣತರಾಗಿದ್ದರು. ಕೇಲುಚರಣ್ ಅವರು ರಂಗಭೂಮಿಯಲ್ಲಿ ತಬಲಾ ವಾದಕರಾಗಿ ಪ್ರದರ್ಶನ ನೀಡುತ್ತಿದ್ದರು. 1947ರಲ್ಲಿ ಅವರು ವಿವಾಹವಾಗಿದ್ದು, ನಂತರ ಲಕ್ಷ್ಮಿಪ್ರಿಯ ತಮ್ಮ ವೃತ್ತಿಯನ್ನು ತೊರೆದರು. ಲಕ್ಷ್ಮಿಪ್ರಿಯ ಅವರು ನಾಲ್ಕು ಒಡಿಯಾ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಇದನ್ನೂ ಓದಿ:ವಿಷಕಾರಿ ಮದ್ಯ ಸೇವಿಸಿ ಉತ್ತರ ಪ್ರದೇಶದಲ್ಲಿ ನಾಲ್ವರು ಬಲಿ
ಲಕ್ಷ್ಮಿಪ್ರಿಯ ಅವರ ಸಾವಿನ ಸುದ್ದಿ ಕೇಳಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ಸೂಚಿಸಿದ್ದಾರೆ. ಒಡಿಸ್ಸಿ ನೃತ್ಯವನ್ನು ಉತ್ತೇಜಿಸುವಲ್ಲಿ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಂಡಿದ್ದಾರೆ.