ಚೆನ್ನೈ :ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತದ ಕಾರ್ಮಿಕರು ಭಯಪಡುವ ಅಗತ್ಯವಿಲ್ಲ, ಅವರಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ಆರ್ಎನ್ ರವಿ ಭಾನುವಾರ ಹೇಳಿದ್ದಾರೆ. ಉತ್ತರ ಭಾರತದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಬಿಂಬಿಸಲಾದ ಹಲವಾರು ನಕಲಿ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಕಾರ್ಮಿಕರ ಭಯ ನಿವಾರಿಸುವ ನಿಟ್ಟಿನಲ್ಲಿ ರಾಜ್ಯಪಾಲರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ತಮಿಳುನಾಡಿನಲ್ಲಿರುವ ಉತ್ತರ ಭಾರತದ ಕಾರ್ಮಿಕರು ಭಯಭೀತರಾಗಬೇಡಿ ಮತ್ತು ಅಭದ್ರತೆಯ ಭಾವನೆ ಹೊಂದಬೇಡಿ. ತಮಿಳುನಾಡಿನ ಜನರು ತುಂಬಾ ಒಳ್ಳೆಯವರು ಮತ್ತು ಸ್ನೇಹಪರರಾಗಿದ್ದಾರೆ. ಉತ್ತರ ಭಾರತದ ಜನರಿಗೆ ಭದ್ರತೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲ ಆರ್ಎನ್ ರವಿ ಹೇಳಿದರು. ಬಿಹಾರ ಮೂಲದ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗಿದೆ ಎಂದು ತೋರಿಸುವ ವೀಡಿಯೊಗಳ ನಂತರ ಈ ಘಟನೆಗಳ ಬಗ್ಗೆ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದರು.
ತಮಿಳುನಾಡು ಸರ್ಕಾರದ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಮತ್ತು ತಮ್ಮ ರಾಜ್ಯದ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸೂಚಿಸಿದ್ದರು. ವಲಸೆ ಕಾರ್ಮಿಕರನ್ನು ಅವಲಂಬಿಸಿರುವ ತಮಿಳುನಾಡಿನ ಹಲವಾರು ಕೈಗಾರಿಕೆಗಳ ಮೇಲೆ ಹಲ್ಲೆ ವೀಡಿಯೊಗಳಿಂದ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಅನೇಕ ವಲಸೆ ಕಾರ್ಮಿಕರು ಕೆಲಸದಿಂದ ದೂರ ಉಳಿದಿದ್ದಾರೆ.
ಹಲ್ಲೆ ವೀಡಿಯೊಗಳಿಂದ ಸೃಷ್ಟಿಯಾದ ಆತಂಕವನ್ನು ಗಮನಿಸಿದತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕ ಸೈಲೇಂದ್ರ ಬಾಬು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸುಳ್ಳು ಮತ್ತು ಇದೊಂದು ಕುಚೇಷ್ಟೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಹಾರದಲ್ಲಿ ಯಾರೋ ಸುಳ್ಳು ಮತ್ತು ಕಿಡಿಗೇಡಿತನದ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ತಿರುಪ್ಪೂರ್ ಮತ್ತು ಕೊಯಮತ್ತೂರಿನಲ್ಲಿ ಹಿಂದೆ ಯಾವಾಗಲೋ ಈ ಘಟನೆಗಳು ನಡೆದಿವೆ. ವಲಸೆ ಕಾರ್ಮಿಕರ ಎರಡು ಗುಂಪುಗಳ ನಡುವಿನ ಘರ್ಷಣೆಯ ವೀಡಿಯೊ ಬಿಹಾರದಲ್ಲಿ ನಡೆದ ಘಟನೆಯದಾಗಿದ್ದು, ಇಬ್ಬರು ಸ್ಥಳೀಯರು ಜಗಳವಾಡುತ್ತಿರುವ ವೀಡಿಯೊ ಕೊಯಮತ್ತೂರಿನದಾಗಿದೆ ಸೈಲೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಡಿಜಿಪಿ ಸೈಲೇಂದ್ರ ಬಾಬು ತಿಳಿಸಿದ್ದಾರೆ. ಘಟನೆಗೆ ಪ್ರತಿಕ್ರಿಯೆಯಾಗಿ ತಮಿಳುನಾಡು ಪೊಲೀಸರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮಿಳುನಾಡಿನ ಡಿಜಿಪಿ ಪ್ರಕಾರ, ತಿರುಪ್ಪೂರ್ ಉತ್ತರ ಪೊಲೀಸ್ ಠಾಣೆಯಲ್ಲಿ ದೈನಿಕ್ ಭಾಸ್ಕರ್ ಸಂಪಾದಕರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 153 (A), 505 (i) (b) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಿಜೆಪಿ ವಕ್ತಾರ ಪ್ರಶಾಂತ್ ಉಮ್ರಾವ್ ವಿರುದ್ಧ ಟುಟಿಕೋರಿನ್ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದಲ್ಲದೆ, ಟ್ವಿಟರ್ ಹ್ಯಾಂಡಲ್ 'Tanvir Post' ನ ಮಾಲೀಕ ಮೊಹಮ್ಮದ್ ತನ್ವೀರ್ ಮತ್ತು ಇನ್ನೊಬ್ಬ ಶುಭಂ ಸುಖ್ಲಾ ಅವರ ಮೇಲೂ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡುವಂತೆ ಡಿಜಿಪಿ ಆದೇಶಿಸಿದ್ದಾರೆ.
ಇದನ್ನೂ ಓದಿ : ಬೇಕರಿ ಮಾಲೀಕ ಪೆಟ್ರೋಲಿಗೆ ಕಾಸು ಕೊಟ್ಟಿಲ್ಲವೆಂದು ಗ್ರಾಹಕನ ಉದ್ಧಟತನ