ತ್ರಿಶೂರ್(ಕೇರಳ) :ಒಡಹುಟ್ಟಿದ ತಂಗಿ ಮದುವೆಗೋಸ್ಕರ ಚಿನ್ನ ಖರೀದಿ ಮಾಡಲು ಬ್ಯಾಂಕ್ನಲ್ಲಿ ಸಾಲ ಸಿಗದ ಕಾರಣ 26 ವರ್ಷದ ಸಹೋದರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
ಚಿನ್ನ ಖರೀದಿ ಮಾಡಲು ಮುಂದಾಗಿದ್ದ ಪಿ ವಿ ವಿಪಿನ್, ತನ್ನ ಸಹೋದರಿ ಹಾಗೂ ತಾಯಿಯನ್ನ ಜ್ಯುವೆಲ್ಲರಿ ಶಾಪ್ನಲ್ಲಿ ಬಿಟ್ಟು ಹಣ ತೆಗೆದುಕೊಂಡು ಬರಲು ಬ್ಯಾಂಕ್ಗೆ ತೆರಳಿದ್ದಾನೆ. ಈ ವೇಳೆ ಸಾಲ ನೀಡಲು ಬ್ಯಾಂಕ್ ನಿರಾಕರಣೆ ಮಾಡಿದ್ದರಿಂದ ಬೇರೆ ಹಾದಿ ಕಾಣದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತ್ರಿಶೂರ್ನ ಚೆಂಬುಕ್ಕಾವು ಎಂಬಲ್ಲಿ ಈ ಘಟನೆ ನಡೆದಿದೆ. ತನ್ನ ಸಹೋದರಿ ಮದುವೆಗೋಸ್ಕರ ಚಿನ್ನಾಭರಣ ಖರೀದಿಸಲು ಆತ ಬ್ಯಾಂಕ್ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದನೆಂದು ತಿಳಿದು ಬಂದಿದೆ.
ಸಾಲ ಮಂಜೂರಾಗಿದ್ದಾಗಿ ತಿಳಿಸಿದ್ದ ಬ್ಯಾಂಕ್ ;ಚಿನ್ನ ಖರೀದಿ ಮಾಡಲು ಹೋಗುವ ಹಿಂದಿನ ದಿನ ಬ್ಯಾಂಕ್ ಅಧಿಕಾರಿಗಳು ವಿಪಿನ್ಗೆ ಫೋನ್ ಮಾಡಿ, ಸಾಲ ಮಂಜೂರು ಆಗಿರುವುದಾಗಿ ತಿಳಿಸಿದ್ದರು.
ಹೀಗಾಗಿ, ತಾಯಿ-ಸಹೋದರಿಯನ್ನ ಜ್ಯುವೆಲ್ಲರಿ ಶಾಪ್ನಲ್ಲಿ ಬಿಟ್ಟು, ಆತ ಹಣ ಪಡೆದುಕೊಂಡು ಬರಲು ಬ್ಯಾಂಕ್ಗೆ ಹೋಗಿದ್ದ. ಆದರೆ, ಕೊನೆ ಕ್ಷಣದಲ್ಲಿ ಆತನ ಅರ್ಜಿ ನಿರಾಕರಣೆಗೊಂಡಿದೆ. ಇದರಿಂದ ಬೇರೆ ದಾರಿ ಕಾಣದೇ ಮನೆಗೆ ತೆರಳಿರುವ ವಿಪಿನ್ ನೇಣು ಬಿಗಿದುಕೊಂಡು ಅತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನೂ ಓದಿರಿ:ರೈತರ ಎಲ್ಲ ಬೇಡಿಕೆ ಅಂಗೀಕಾರಕ್ಕೆ ಕೇಂದ್ರದ ಒಪ್ಪಿಗೆ: ಪ್ರತಿಭಟನೆ ಹಿಂಪಡೆದುಕೊಳ್ಳಲಿರುವ ಅನ್ನದಾತರು!?
ಜ್ಯುವೆಲ್ಲರಿ ಶಾಪ್ನಲ್ಲಿ ಕಾಯ್ದು ಕಾಯ್ದು ತಾಯಿ-ಮಗಳು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಪಿನ್ ಕುಟುಂಬ ಕೇವಲ ಮೂರು ಗುಂಟೆ ಭೂಮಿ ಹೊಂದಿದೆ. ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಸಿಗುವುದಿಲ್ಲ. ಹೀಗಾಗಿ, ಖಾಸಗಿ ಬ್ಯಾಂಕ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಸಾಲ ನೀಡಲು ಅಧಿಕಾರಿಗಳು ಒಪ್ಪಿದ್ದರು.
ಆದರೆ, ಹಣ ಪಡೆದುಕೊಂಡು ಬರಲು ಹೋದಾಗ ಸಾಲ ನೀಡಲು ಆಗುವುದಿಲ್ಲ ಎಂದು ಹೇಳಿರುವ ಕಾರಣ, ವಿಪಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.