ತಿರುಮಲ (ಆಂಧ್ರ ಪ್ರದೇಶ):ನಿವಾರ್ ಚಂಡಮಾರುತದಿಂದಾಗಿ ನೈರುತ್ಯ ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಆಂಧ್ರದ ಭಾಗದಲ್ಲೂ ಮಳೆಯಾರ್ಭಟ ಜೋರಾಗಿದೆ.
ಇಲ್ಲಿನ ತಿರುಮಲ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ರಸ್ತೆ ಸಂಚಾರಕ್ಕೆ ಅಡೆತಡೆಯಾಗಿದೆ. ಅಲ್ಲದೇ ತಿರುಮಲ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾಧಿಗಳು ದಾರಿ ಮಧ್ಯದಲ್ಲಿಯೇ ಸಿಲುಕಿದ್ದರು.
ತಿರುಮಲಕ್ಕೂ ತಟ್ಟಿದ ‘ನಿವಾರ್’: ಜಲಾಶಯಗಳು ಭರ್ತಿ, ರಸ್ತೆ ಸಂಚಾರ ಅಸ್ತವ್ಯಸ್ತ ತಿರುಮಲ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿದ್ದವು. ಇದರಿಂದ ವಾಹನ ಸಂಚಾರ ಕಡಿತಗೊಂಡಿತ್ತು. ಇದೀಗ ನೀರಿನ ಹರಿವು ಕಡಿಮೆಯಾಗುತ್ತಿದ್ದು, ನಿಧಾನವಾಗಿ ವಾಹನಗಳು ಸಂಚಾರ ಆರಂಭಿಸಿವೆ.
ತಿರುಮಲದ ಎಲ್ಲ ಜಲಾಶಯಗಳು ಈಗಾಗಲೇ ತುಂಬಿದ್ದು, ಕುಮಾರಧಾರ, ಪಸುಪುದರ, ಪಾಪನಿನಾಸಂ, ಆಕಾಶಗಂಗೆ ಜಲಾಶಯಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆ ಜಲಾಶಯದಿಂದ ನೀರು ಹರಿಬಿಡಲಾಗುತ್ತಿದ್ದು, ತಿರುಮಲ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ನಿನ್ನೆ ಸಂಜೆಯಿಂದಲೂ ವಿಪರೀತ ಗಾಳಿ ಬೀಸುತ್ತಿದ್ದು ಹಲವೆಡೆ ಮರಗಳು ಧರೆಗುರುಳಿವೆ. ಘಾಟಿಯಲ್ಲಿ ಬಂಡೆಗಳು ರಸ್ತೆಗುರುಳಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಇದೀಗ ಬಂಡೆಗಳ ತೆರವು ಮಾಡಲಾಗಿದ್ದು, ಸಂಚಾರ ಮುಕ್ತವಾಗಿದೆ.
ಬೆಳಗ್ಗೆ ಭಕ್ತರು ಸಂಚರಿಸುತ್ತಿದ್ದ ಕಾರಿನ ಮುಂಭಾಗ ಬಂಡೆಯೊಂದು ಉರುಳಿ ಅದೃಷ್ಟವಶಾತ್ ಭಕ್ತರು ಪಾರಾಗಿದ್ದರು. ಘಟನೆಯಲ್ಲಿ ಕಾರಿನ ಚಕ್ರವು ಹಾನಿಯಾಗಿ ರಸ್ತೆಯಲ್ಲಿ ಸಿಲುಕಿದ್ದರು.