ನಾಗ್ಪುರ (ಮಹಾರಾಷ್ಟ್ರ): ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಮೂರು ಬೆದರಿಕೆ ಕರೆಗಳು ಬಂದಿರುವ ಘಟನೆ ಶನಿವಾರ ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಈ ಬೆದರಿಕೆ ಕರೆಗಳು ಬಂದಿದ್ದು, ಹಣ ವಸೂಲಿಗಾಗಿ ಬೇಡಿಕೆ ಮತ್ತು ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ ಎನ್ನಲಾಗಿದೆ. ಈ ವಿಷಯ ತಿಳಿದ ತಕ್ಷಣವೇ ನಾಗ್ಪುರ ಪೊಲೀಸರು ಕಚೇರಿಗೆ ಭದ್ರತೆ ಹೆಚ್ಚಿಸಿದ್ದಾರೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆಗಿ ಗಡ್ಕರಿ ಅವರ ಕಚೇರಿಯ ಲ್ಯಾಂಡ್ಲೈನ್ ನಂಬರ್‌ಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಹಣ ವಸೂಲಿಗಾಗಿ ಬೇಡಿಕೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕರೆಗಳನ್ನು ಸ್ವೀಕರಿಸಿದ ತಕ್ಷಣ ಕಚೇರಿಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುವುದೊಂದಿಗೆ ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗ್ಪುರ ಡಿಸಿಪಿ ರಾಹುಲ್ ಮದನೆ, ಕೇಂದ್ರ ಸಚಿವ ಗಡ್ಕರಿ ಅವರ ಕಚೇರಿಯ ಲ್ಯಾಂಡ್ಲೈನ್ ನಂಬರ್‌ಗೆ ಇಂದು ಬೆಳಗ್ಗೆ 11.25, 11.32 ಮತ್ತು ಮಧ್ಯಾಹ್ನ 12.32ಕ್ಕೆ ಬಿಎಸ್‌ಎನ್‌ಎಲ್‌ನಿಂದ ಮೂರು ಕರೆಗಳು ಬಂದಿವೆ. ಈ ಕರೆಗಳ ವಿವರಗಳ ದಾಖಲೆ (CDR - Call Detail Record)ಗಳನ್ನು ಕಲೆ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಪರಾಧ ವಿಭಾಗವು ಕಾರ್ಯೋನ್ಮುಖವಾಗಿದೆ. ಸಚಿವರ ಕಚೇರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮ ಸ್ಥಳದಲ್ಲೂ ಹೆಚ್ಚಿನ ಭದ್ರತೆ: ಸಚಿವ ನಿತಿನ್ ಗಡ್ಕರಿ ಅವರು ಪ್ರಸ್ತುತ ಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ನಾಗ್ಪುರದಲ್ಲೇ ಇದ್ದಾರೆ. ಒಂದು ದಿನದ ಹಿಂದೆ ಅವರು ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋ -2023ರ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಬೆದರಿಕೆ ಕರೆಗಳು ಬಂದ ಕಾರಣದಿಂದಾಗಿ ನಾಗ್ಪುರದಲ್ಲಿ ಗಡ್ಕರಿ ಭಾಗವಹಿಸುವ ಕಾರ್ಯಕ್ರಮ ಸ್ಥಳದಲ್ಲೂ ಭದ್ರತೆ ಹೆಚ್ಚಿಸಲಾಗುವುದು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.