ಅಮರಾವತಿ, ಆಂಧ್ರಪ್ರದೇಶ: ಈ ರಾಜ್ಯದಿಂದ ವಿಷಾದಕರ ಸುದ್ದಿಯೊಂದು ಕೇಳಿ ಬಂದಿದೆ. ಇತ್ತಿಚೇಗೆ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಪಾಸಾಗದ ಹಿನ್ನೆಲೆ ಸುಮಾರು ಒಂಬತ್ತು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಹೌದು, ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ, ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಒಂಬತ್ತು ಇಂಟರ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.
ಚಿತ್ತೂರು ಜಿಲ್ಲೆಯ ಪುಂಗನೂರು ಮಂಡಲದ ಏಟವಕ್ಕಿಲಿಯ ವಿದ್ಯಾರ್ಥಿನಿ ಅನುಷಾ (17) ಇಂಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಗುರುವಾರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಷಾ ಇತ್ತೀಚೆಗೆ ಕರ್ನಾಟಕದಲ್ಲಿದ್ದ ತಮ್ಮ ಅಜ್ಜಿಯ ಮನಗೆ ಹೋಗಿದ್ದರು. ಬುಧವಾರ ವಿದ್ಯಾರ್ಥಿನಿಯ ತಾಯಿ ಕರೆ ಮಾಡಿ ವಿಷಯವೊಂದರಲ್ಲಿ ಫೇಲ್ ಆಗಿದ್ದೀಯಾ ಎಂದು ತಿಳಿಸಿದ್ದರು. ಇನ್ನೆರಡು ದಿನದಲ್ಲಿ ಬಂದು ಎಕ್ಸಾಮ್ ಫೀ ಕಟ್ಟಿ ಈ ಸಲ ಪಾಸ್ ಆಗುತ್ತೇನೆ ಎಂದು ಅಮ್ಮನಿಗೆ ಧೈರ್ಯ ಹೇಳಿದ್ದಳು ಅನುಷಾ. ಆದರೆ ಗುರುವಾರ ಬೆಳಗ್ಗೆ ಮಗಳ ಸಾವಿನ ಸುದ್ದಿ ಕೇಳಿ ಕಂಗಾಲಾದ ಪೋಷಕರು ಕರ್ನಾಟಕಕ್ಕೆ ತೆರಳಿದ್ದಾರೆ.
ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿಯ ಕೃಷ್ಣಪ್ಪ ಅವರ ಪುತ್ರ ಬಾಬು (17) ಇಂಟರ್ ಎಂಪಿಸಿ ದ್ವಿತೀಯ ವರ್ಷದ ಗಣಿತದಲ್ಲಿ ತೇರ್ಗಡೆಯಾಗಿರಲಿಲ್ಲ. ಇದರಿಂದ ಮನನೊಂದ ಅವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅನಕಾಪಲ್ಲಿಯ ಕರುಬೋಟು ರಾಮರಾವ್ ಮತ್ತು ಅಪ್ಪಲರಮಣ ದಂಪತಿಯ ಕಿರಿಯ ಪುತ್ರ ಕರುಬೋಟು ತುಳಸಿ ಕಿರಣ್ (17) ಗುರುವಾರ ಇಂಟರ್ ಮೊದಲ ವರ್ಷದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದಿದ್ದ ಶ್ರೀಕಾಕುಳಂ ಜಿಲ್ಲೆ ಸಂತಬೊಮ್ಮಾಳಿ ತಾಲೂಕಿನ ದಂಡುಗೋಪಾಲಪುರಂ ಗ್ರಾಮದ ಬಾಲಕ ತರುಣ್ (17) ಗುರುವಾರ ತೆಕ್ಕಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪೋಷಕರು ಕೃಷ್ಣರಾವ್ ಮತ್ತು ದಮಯಂತಿ ರಾಜಮಹೇಂದ್ರವರಂನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶಾಖಪಟ್ಟಣದ ಆತ್ಮಕೂರು ಅಖಿಲಶ್ರೀ (16) ಇಂಟರ್ ಫಲಿತಾಂಶದಲ್ಲಿ ಪಾಸ್ ಆಗಲಿಲ್ಲ ಎಂಬ ಬೇಸರದಿಂದ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಕೂಲಿ ಮಾಡಿ ಮಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶವವನ್ನು ರಹಸ್ಯವಾಗಿ ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದಾಗ ಪೊಲೀಸರು ಅದನ್ನು ತಡೆದು ಮರಣೋತ್ತರ ಪರೀಕ್ಷೆಗಾಗಿ ಕೆಜಿಎಚ್‌ಗೆ ಸ್ಥಳಾಂತರಿಸಿದರು.