ಮುಂಬೈ (ಮಹಾರಾಷ್ಟ್ರ):ಹೃದಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಮೂರು ತಿಂಗಳ ಕಾಲ ಗೃಹಬಂಧನದಲ್ಲಿರಿಸುವಂತೆ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಲ್ಲಿಸಿದ ಮನವಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ಬುಧವಾರ ವಜಾಗೊಳಿಸಿದೆ.
ಇದರ ಬದಲಾಗಿ ವಾಜೆಯನ್ನು ತಲೋಜಾ ಜೈಲು ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು ಎಂದು ಕೋರ್ಟ್ ತಿಳಿಸಿದ್ದು, ಮನೆಯ ಆಹಾರವನ್ನು ಅವರಿಗೆ ತಲುಪಿಸಲು ಅನುಮತಿ ನೀಡಿದೆ. ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜೈಲು ಆಸ್ಪತ್ರೆಯಿಂದ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಬಹುದು ಎಂದು ಹೇಳಿದೆ.
ಇದನ್ನೂ ಓದಿ: Antilia ಪ್ರಕರಣ: ವಾಜೆ ಜಾಮೀನು ಅರ್ಜಿಗೆ ಎನ್‌ಐಎ ಆಕ್ಷೇಪ
ಉದ್ಯಮಿ ಮುಖೇಶ್ ಅಂಬಾನಿ ಅವರ ಆ್ಯಂಟಿಲಿಯಾ ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳು ಪತ್ತೆ ಪ್ರಕರಣ ಹಾಗೂ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಸಾವು ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ಸಚಿನ್ ವಾಜೆ ಅವರನ್ನು ಬಂಧಿಸಿದ್ದರು. ಜೈಲಿನಲ್ಲಿದ್ದ ವಾಜೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದು, ಸೆಪ್ಟೆಂಬರ್ 13 ರಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆ ಬಳಿಕ ಜೈಲಿನಲ್ಲಿ ಕ್ಷಯರೋಗ ಸೇರಿದಂತೆ ಇತರ ಸೋಂಕು ಅಂಟುವ ದೃಷ್ಟಿಯಿಂದ ಪೊಲೀಸ್ ಕಾವಲುಗಾರರೊಂದಿಗೆ ನನ್ನನ್ನು ಗೃಹಬಂಧನದಲ್ಲಿರಿಸಿ. ಮನೆಯಲ್ಲಿ ಏಳು ಪೊಲೀಸ್ ಕಾವಲುಗಾರರನ್ನು ನೇಮಿಸುವ ವೆಚ್ಚವನ್ನು ನಾನು ಭರಿಸುವೆ ಎಂದು ವಾಜೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಎನ್‌ಐಎ ಕೋರ್ಟ್ ಸಮ್ಮತಿ ನೀಡಿಲ್ಲ. ಅಲ್ಲದೇ ಇದಕ್ಕೂ ಮುನ್ನ ವಾಜೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.