ನವದೆಹಲಿ: ಉತ್ತರ ಪ್ರದೇಶದ ಗ್ಯಾಂಗ್ಸ್ಟರ್, ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಉತ್ತರ ಪ್ರದೇಶ ಪೊಲೀಸರಿಗೆ ಇಂದು ನೋಟಿಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸುಮಾರು ನೂರು ಪೊಲೀಸ್ ಪ್ರಕರಣಗಳನ್ನು ಎದುರಿಸಿದ್ದ ಅತೀಕ್ ಅಹ್ಮದ್ ಮತ್ತು 50ಕ್ಕೂ ಹೆಚ್ಚು ಪ್ರಕರಣಗಳ ಎದುರಿಸಿದ್ದ ಸಹೋದರ ಅಶ್ರಫ್ ಅಹ್ಮದ್ನನ್ನು ಶನಿವಾರ ರಾತ್ರಿ ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪತ್ರಕರ್ತರ ವೇಷದಲ್ಲಿ ಬಂದು ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿ ಇಬ್ಬರನ್ನೂ ಹತ್ಯೆಗೈದಿದ್ದರು.
ಇದನ್ನೂ ಓದಿ:ಅತೀಕ್ ಅಹ್ಮದ್ ಪತ್ನಿ ಇರುವ ಸ್ಥಳದ ಜಾಡು ಕಂಡು ಹಿಡಿದ ಪೊಲೀಸರು.. ಬಂಧನಕ್ಕಾಗಿ ತೀವ್ರ ಶೋಧ
ಪೊಲೀಸರು ಬೆಂಗಾವಲು ಇದ್ದಾಗಲೇ ನಡೆದ ಜೋಡಿ ಕೊಲೆ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಮತ್ತು ಪ್ರಯಾಗ್‌ರಾಜ್ ಪೊಲೀಸ್ ಆಯುಕ್ತರಿಗೆ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳಲ್ಲಿ ವರದಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.
''ಹತ್ಯೆಗೆ ಕಾರಣವಾಗುವ ಎಲ್ಲ ಅಂಶಗಳು ವರದಿಯಲ್ಲಿರಬೇಕು. ಮೃತರ ವೈದ್ಯಕೀಯ ಮತ್ತು ಕಾನೂನು ಪ್ರಮಾಣಪತ್ರಗಳ ಪ್ರತಿಗಳು, ವಿಚಾರಣೆಯ ವರದಿ, ಮರಣೋತ್ತರ ಪರೀಕ್ಷೆಯ ವರದಿ, ವಿಡಿಯೋ ಕ್ಯಾಸೆಟ್/ಮರಣೋತ್ತರ ಪರೀಕ್ಷೆಯ ಸಿಡಿ, ಅಪರಾಧ ಸಂಭವಿಸಿದ ಸ್ಥಳದ ಯೋಜನೆ ಮತ್ತು ಮ್ಯಾಜಿಸ್ಟ್ರಿಯಲ್ ವಿಚಾರಣೆ ವರದಿ ಒಳಗೊಂಡಂತೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು" ಎಂದು ಎನ್‌ಎಚ್‌ಆರ್‌ಸಿ ನೋಟಿಸ್ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಮೋದಿ ವಿರುದ್ಧ ಸ್ಪರ್ಧಿಸಿ 855 ವೋಟ್ ಪಡೆದಿದ್ದ ಅತೀಕ್ ಅಹ್ಮದ್; ಈತನ ಮೇಲಿತ್ತು 101 ಪ್ರಕರಣ!
ಪ್ರಕರಣದ ಹಿನ್ನೆಲೆ:2005ರಲ್ಲಿ ನಡೆದ ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣ ಮತ್ತು ಈ ವರ್ಷದ ಫೆಬ್ರವರಿಯಲ್ಲಿ ನಡೆದ ವಕೀಲ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಮತ್ತು ಸಹೋದರ ಅಶ್ರಫ್ ಆರೋಪಿಯಾಗಿದ್ದರು. ರಾಜು ಪಾಲ್ ಕೊಲೆ ಪ್ರಕರಣದ ತೀರ್ಪು ಹಾಗೂ ಉಮೇಶ್ ಪಾಲ್ ಕೊಲೆ ವಿಚಾರಣೆಗಾಗಿ ಗುಜರಾತ್ನ ಸಬರಮತಿ ಜೈಲಿನಿಂದ ಅತೀಕ್ ಮತ್ತು ಬರೇಲಿ ಜೈಲಿನಲ್ಲಿದ್ದ ಅಶ್ರಫ್ನನ್ನು ಮಾರ್ಚ್ 26ರಂದು ಪ್ರಯಾಗ್‌ರಾಜ್‌ಗೆ ಕರೆತರಲಾಗಿತ್ತು. ಶಾಸಕರ ಹತ್ಯೆ ಪ್ರಕರಣದಲ್ಲಿ ಅತೀಕ್ ದೋಷಿ ಎಂದು ಪ್ರಕಟಿಸಿದ್ದ ನಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೇ ವೇಳೆ ಅಶ್ರಫ್ನನ್ನು ಖುಲಾಸೆಗೊಳಿಸಿತ್ತು.
ಮತ್ತೊಂದೆಡೆ, ಇದೇ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲೂ ಅತೀಕ್ನ ಪುತ್ರ ಅಸದ್ ಮತ್ತ ಶೂಟರ್ ಗುಲಾಮ್ ಶಾಮೀಲಾಗಿದ್ದರು. ಆದರೆ, ಏಪ್ರಿಲ್ 13ರಂದು ಅತೀಕ್ ಮತ್ತು ಅಶ್ರಫ್ನನ್ನು ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ವಾಹನ ಮೇಲೆ ದಾಳಿಗೆ ಹೊಂಚು ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ನಡೆದ ಎನ್ಕೌಂಟರ್ನಲ್ಲಿ ಅಸದ್ ಮತ್ತು ಗುಲಾಮ್ ಹತರಾಗಿದ್ದರು. ಇದಾದ ಎರಡು ದಿನಗಳಲ್ಲಿ ಎಂದರೆ, ಏಪ್ರಿಲ್ 15ರಂದು ಪೊಲೀಸರ ಸಮ್ಮುಖದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಇಬ್ಬರನ್ನೂ ಹತ್ಯೆ ಮಾಡಿದ್ದರು.
ಇದನ್ನೂ ಓದಿ:ಅತೀಕ್ ಅಹ್ಮದ್ ಪರ ವಕೀಲ ದಯಾಶಂಕರ್ ಮಿಶ್ರಾ ಮನೆ ಬಳಿ ಕಚ್ಚಾ ಬಾಂಬ್ ಸ್ಫೋಟ