ನವದೆಹಲಿ: ದೋಷಪೂರಿತ ಫಾಸ್ಟ್‌ಟ್ಯಾಗ್‌ಗಳು ಮತ್ತು ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ತಮ್ಮ ಫಾಸ್ಟ್‌ಟ್ಯಾಗ್‌ಗಳು ಕಾರ್ಯನಿರ್ವಹಿಸದಿರುವಾಗ ವಾಹನ ಚಾಲಕರಿಂದ ಸಂಗ್ರಹಿಸಲಾದ ದಂಡದ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ. ವಾಹನ ಚಾಲಕರು ಫಾಸ್ಟ್‌ಟ್ಯಾಗ್ ಹೊಂದಿಲ್ಲದಿದ್ದರೆ ಅಥವಾ ಅದು ಕಾರ್ಯನಿರ್ವಹಿಸದಿದ್ದರೆ, ವ್ಯಕ್ತಿಯು ಟೋಲ್ ಪ್ಲಾಜಾಗಳಲ್ಲಿ ಎರಡು ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದು ಗಮನಾರ್ಹ.
ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಪ್ರಕಾರ ಅಕ್ಟೋಬರ್ 31, 2022 ರಲ್ಲಿದ್ದಂತೆ 6 ಕೋಟಿಗೂ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ. ಆದಾಗ್ಯೂ, ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ಟ್ಯಾಗ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿದ್ದರೂ, ದೋಷಯುಕ್ತ ಫಾಸ್ಟ್‌ಟ್ಯಾಗ್ ಪ್ರಕರಣಗಳ ಸಂಖ್ಯೆ ಮತ್ತು ಬಳಕೆದಾರರಿಂದ ಸಂಗ್ರಹಿಸಲಾದ ಒಟ್ಟು ದಂಡದ ಬಗ್ಗೆ ಯಾವುದೇ ಮಾಹಿತಿ ಎನ್‌ಎಚ್‌ಎಐ ಬಳಿ ಇಲ್ಲ.
ಫಾಸ್ಟ್‌ಟ್ಯಾಗ್ ಹೊಂದಿರದ ವಾಹನಗಳಿಗೆ ಎರಡು ಪಟ್ಟ ದಂಡ:31.10.2022 ರವರೆಗೆ ಒಟ್ಟು 60,277,364 ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಪಿಟಿಐ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎನ್‌ಎಚ್‌ಎಐ ಹೇಳಿದೆ. ಹೆದ್ದಾರಿ ನಿರ್ವಾಹಕರು ಸ್ಥಾಪಿಸಿದ ಟೋಲ್ ಸಂಗ್ರಹಣೆ ಬೂತ್‌ಗಳಲ್ಲಿ ವಾಹನಗಳನ್ನು ನಿಲ್ಲಿಸದೆಯೇ ಎಲೆಕ್ಟ್ರಾನಿಕ್ ರೂಪದಲ್ಲಿ ಹೆದ್ದಾರಿ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತದೆ. ಫೆಬ್ರವರಿ 16, 2021 ರಿಂದ ಸರ್ಕಾರವು ಎಲ್ಲ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಿದೆ. ನಿಯಮಗಳ ಪ್ರಕಾರ, ಚಾಲನೆಯಲ್ಲಿರುವ ಅಥವಾ ಸಕ್ರಿಯವಾದ ಫಾಸ್ಟ್‌ಟ್ಯಾಗ್ ಹೊಂದಿರದ ವಾಹನಗಳು ಟೋಲ್ ಶುಲ್ಕದ ಎರಡು ಪಟ್ಟು ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.
ದೋಷಪೂರಿತ ಫಾಸ್ಟ್‌ಟ್ಯಾಗ್ ನೀಡಿದ್ದಕ್ಕಾಗಿ ಯಾವುದೇ ಫಾಸ್ಟ್‌ಟ್ಯಾಗ್ ವಿತರಣಾ ಏಜೆನ್ಸಿಯ ವಿರುದ್ಧ ಯಾವುದೇ ದಂಡದ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಎನ್‌ಎಚ್‌ಎಐ, ಅಂಥ ಯಾವುದೇ ಡೇಟಾ ಲಭ್ಯವಿಲ್ಲ ಎಂದು ಹೇಳಿದೆ. ಎನ್‌ಪಿಸಿಐ ಡೇಟಾ ಪ್ರಕಾರ 16.02.2021 ರಿಂದ 16.04.2022 ರವರೆಗೆ ಎನ್‌ಎಚ್‌ಎಐ ನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಒಟ್ಟು ಟೋಲ್ ಸಂಗ್ರಹವು 39,118.15 ಕೋಟಿ ರೂಪಾಯಿಯಾಗಿದೆ ಎಂದು ಆರ್‌ಟಿಐ ಉತ್ತರ ಹೇಳಿದೆ.