ವಾರಣಾಸಿ (ಉತ್ತರಪ್ರದೇಶ):ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೃಷಿ ಕಾಯ್ದೆಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳು ರೈತರಿಗೆ ಅಧಿಕಾರ ನೀಡಿವೆ. ಈ ಕಾಯ್ದೆಗಳಿಂದ ರೈತರಿಗೆ ಹೊಸ ಆಯ್ಕೆಗಳು ಸಿಗಲಿದ್ದು, ಕಾನೂನಿನ ರಕ್ಷಣೆ ನೀಡುತ್ತವೆ ಎಂದು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 19ರ ಆರು ಪಥಗಳ ಹಂಡಿಯಾ (ಪ್ರಯಾಗರಾಜ್)-ರಾಜತಾಲಾಬ್ (ವಾರಣಾಸಿ) ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ವೇಳೆ ಪ್ರಧಾನಿ ಮೋದಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಭಾರತದ ಕೃಷಿ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಈ ಉತ್ಪನ್ನಗಳೂ ಕೂಡಾ ದೊಡ್ಡ ಮಾರುಕಟ್ಟೆಗಳನ್ನು ತಲುಪಿ ರೈತರಿಗೆ ಲಾಭ ದೊರಕಬೇಕು. ಒಬ್ಬ ರೈತನು ತನ್ನ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಬೇಕು. ಲಾಭ ನೀಡುವವರಿಗೆ ಮಾರಾಟ ಮಾಡುವ ಸ್ವಾತಂತ್ರ್ಯ ಅವರಿಗೆ ಇರಬೇಕು. ಆದ್ದರಿಂದ ಈ ನೀತಿಗಳನ್ನು ಜಾರಿಗೊಳಿಸಲಾಗಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಮೊದಲು, ರೈತರು ಮಾರುಕಟ್ಟೆಯಿಂದ ಹೊರಗೆ ತಮ್ಮ ವಹಿವಾಟು ನಡೆಸುವುದು ಕಾನೂನು ಬಾಹಿರವಾಗಿತ್ತು. ಇಂಥಹ ಸ್ಥಿತಿಯಲ್ಲಿ ಸಣ್ಣ ರೈತರು ಮೋಸ ಹೋಗುತ್ತಿದ್ದರು. ಈಗ ದೊಡ್ಡ ಮಾರುಕಟ್ಟೆಗೆ ತಲುಪಲು ರೈತರಿಗೆ ಅಧಿಕಾರ ನೀಡಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಸುಧಾರಣೆಗಳನ್ನು ಮಾಡಲಾಗುತ್ತಿದೆ ಎಂದು ಮೋದಿ ಸ್ಪಷ್ಟನೆ ನೀಡಿದ್ದಾರೆ.