ಥಾಣೆ, ಮಹಾರಾಷ್ಟ್ರ:ನಗರದಲ್ಲಿ ಆನ್‌ಲೈನ್ ವಂಚನೆ ಪ್ರಕರಣದಲ್ಲಿ 66 ವರ್ಷದ ವ್ಯಕ್ತಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಆನ್‌ಲೈನ್ ಟಾಸ್ಕ್ ಹೆಸರಿನಲ್ಲಿ ನವಿ ಮುಂಬೈನ 66 ವರ್ಷದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು 17 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಶುಕ್ರವಾರ ನೆರೂಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ?: 66 ವರ್ಷದ ಸಂತ್ರಸ್ತನನ್ನು ಫೋನಿನ ಮೂಲಕ ನಾಲ್ವರು ವ್ಯಕ್ತಿಗಳು ಸಂಪರ್ಕಿಸಿದ್ದಾರೆ. ಅವರು ಆ ವೃದ್ಧನಿಗೆ ನಾವು ಪ್ರಮುಖ ಇ-ಕಾಮರ್ಸ್ ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ ನಮ್ಮ ವಿವಿಧ ಉತ್ಪನ್ನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ರಿವಿವ್ ಅಥವಾ ವಿಮರ್ಶೆಗಳನ್ನು ಪೋಸ್ಟ್ ಮಾಡುವ ಕಾರ್ಯಕ್ಕಾಗಿ ನಾವು ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ವೃದ್ಧ ಕೆಲವೊಂದು ಉತ್ಪನ್ನಗಳಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ಕಾರ್ಯಕ್ಕೆ ಅವರು ವೃದ್ಧನ ಅಕೌಂಟ್ಗೆ ಹಣವನ್ನು ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಆ ನಾಲ್ವರು ಆರೋಪಿಗಳು ಚಾಣಕ್ಷತನದಿಂದ ವೃದ್ಧನ ಬಳಿ ಹಣ ಕಿತ್ತಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ಇವರ ಮೇಲೆ ಭರವಸೆ ಮೂಡಿದ್ದರಿಂದ ವೃದ್ಧ ಏಪ್ರಿಲ್ ನಿಂದ ಮೇ ವರೆಗೆ ಕೆಲವೊಂದು ಕಂತುಗಳ ರೂಪದಲ್ಲಿ ಸುಮಾರು 17 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಕೆಲ ದಿನಗಳ ಬಳಿಕ ಮೋಸ ಹೋಗಿರುವುದರ ಬಗ್ಗೆ ವೃದ್ಧನಿಗೆ ಅರಿವಾಗಿದೆ. ಕೂಡಲೇ ಅವರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.