ನವದೆಹಲಿ:ಸಂಸತ್ತಿನಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಡ್ಯಾನಿಶ್ ಅಲಿ ಅವರನ್ನು ಬಿಜೆಪಿ ಸಂಸದ ರಮೇಶ್ ಬಿಧೂರಿ ವಿವಾದಾತ್ಮಕವಾಗಿ ನಿಂದಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರ ನಡುವೆ ಡ್ಯಾನಿಶ್ ಅಲಿ ವಿರುದ್ಧ ಮತ್ತೊಬ್ಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿ ಎಂಪಿ ಡ್ಯಾನಿಶ್, ಸದನದಲ್ಲಿ ನನ್ನ ಮೇಲೆ ಈಗಾಗಲೇ ಮೌಖಿಕವಾಗಿ ದಾಳಿ ಮಾಡಲಾಗಿದೆ. ಈ ಪತ್ರವು ಸದನದ ಹೊರಗೂ ಈ ದಾಳಿಯನ್ನು ಸಕ್ರಿಯಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 21ರಂದು ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಬಿಧೂರಿ, ಬಿಎಸ್‌ಪಿ ಸಂಸದರಾದ ಡ್ಯಾನಿಶ್ ಅವರನ್ನು 'ಮುಸ್ಲಿಂ ಉಗ್ರವಾದಿ' ಎಂದೆಲ್ಲ ನಿಂದನೆ ಮಾಡಿದ್ದರು. ಈ ಹೇಳಿಕೆ ಸಂಬಂಧ ಬಿಜೆಪಿ ವಿಷಾದ ವ್ಯಕ್ತಪಡಿಸಿ ಬಿಧೂರಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೆ, ಇದುವರೆಗೂ ಅವರ ವಿರುದ್ಧ ಪಕ್ಷವಾಗಲಿ ಅಥವಾ ಸ್ಪೀಕರ್ ಆಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ, ರಮೇಶ್ ಬಿಧೂರಿ ಹೇಳಿಕೆ ಬಗ್ಗೆ ರಕ್ಷಣಾ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರಿಂದ ಹಿಡಿದು ಹಲವರಿಂದ ಸಾಕಷ್ಟು ಟೀಕೆಗಳು ಕೇಳಿ ಬಂದಿದೆ.