ಕಾನ್ಪುರ: "ನನ್ನ ಪತಿಯನ್ನು ಕರ್ತವ್ಯದಲ್ಲಿದ್ದ ಆರು ಮಂದಿ ಪೊಲೀಸರು ಹತ್ಯೆ ಮಾಡಿದ್ದಾರೆ" ಎಂದು ಉತ್ತರ ಪ್ರದೇಶದ ಗೋರಖ್‌ಪುರದ ಹೋಟೆಲ್ ಕೊಠಡಿಯಲ್ಲಿ ಸೋಮವಾರ ನಡೆದ ದಾಳಿಯಲ್ಲಿ ಸಾವನ್ನಪ್ಪಿದ ಉದ್ಯಮಿ ಮೃತ ಮನೀಶ್ ಗುಪ್ತಾ (38) ಅವರ ಪತ್ನಿ ಮೀನಾಕ್ಷಿ ಗುಪ್ತಾ ಗಂಭೀರ ಆರೋಪ ಮಾಡಿದ್ದಾರೆ.
ಇನ್ನು ಈ ಸಂಬಂಧ ಕರ್ತವ್ಯದೋಷ ಎಸಗಿದ್ದಕ್ಕಾಗಿ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೀಶ್ ಗುಪ್ತಾ ತನ್ನ ಸ್ನೇಹಿತನೊಂದಿಗೆ ಗೋರಬ್ಪುರಕ್ಕೆ ಕೆಲಸದ ನಿಮಿತ್ತ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದು, ಆ ವೇಳೆ ಘಟನೆ ಸಂಭವಿಸಿದೆ.
"ಹೋಟೆಲ್ ರೂಮ್ ಮೇಲೆ ದಾಳಿ ನಡೆಸಿದಾಗ ನಿರ್ಲಕ್ಷ್ಯ ತೋರಿದ ಆರು ಪೊಲೀಸ್ ಸಿಬ್ಬಂದಿ ಅಮಾನತುಗೊಳಿಸಲಾಗಿದೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮಾಡಲಾಗುವುದು" ಎಂದು ಗೋರಖ್ಪುರ್ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಡಾ ಹೇಳಿದ್ದಾರೆ.
"ಹೋಟೆಲ್ ನಲ್ಲಿ ವಾಸ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಮನೀಶ್ ಗುಪ್ತಾ ಅವರನ್ನು ಗುಂಡಿಕ್ಕಿ ಸಾಯಿಸಿದ್ದಾರೆ. ನಾನು ನನ್ನ ಬೇಡಿಕೆಗಳನ್ನು ಮುಖ್ಯಮಂತ್ರಿಯ ಮುಂದೆ ಹೇಳುತ್ತೇನೆ. ನನ್ನ ಪತಿಯನ್ನು ಕರ್ತವ್ಯದಲ್ಲಿದ್ದ ಆರು ಪೊಲೀಸರು ಹತ್ಯೆ ಮಾಡಿದ್ದಾರೆ" ಎಂದು ಪತ್ನಿ ಮೀನಾಕ್ಷಿ ಗುಪ್ತಾ ಆರೋಪಿಸಿದ್ದಾರೆ.
ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಖ್ ಅಯ್ಯರ್ ಅವರು ಈ ಬಗ್ಗೆ ಮಾತನಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಕಾನ್ಪುರಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಿದರು.