ನವದೆಹಲಿ/ಬೆಂಗಳೂರು: ಹಿಜಾಬ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ವಿಭಿನ್ನ ತೀರ್ಪು ನಂತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಆದೇಶವನ್ನು ಕರ್ನಾಟಕ ಸರ್ಕಾರ ಹಿಂಪಡೆಯಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಗುರುವಾರ ಮನವಿ ಮಾಡಿದೆ. ಒಂದು ವೇಳೆ ಸರ್ಕಾರ ಆದೇಶವನ್ನು ಹಿಂಪಡದ್ರೆ ಇಡೀ ವಿವಾದವೇ ಕೊನೆಗೊಳ್ಳುತ್ತದೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಆದೇಶವು ಸಂವಿಧಾನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ತತ್ವಗಳಿಗೆ ಅನುಗುಣವಾಗಿದೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಪ್ರಕಟಣೆ ಹೊರಡಿಸುವ ಮೂಲಕ ಹೇಳಿದ್ದಾರೆ.
ನ್ಯಾಯಮೂರ್ತಿ ಧುಲಿಯಾ ಅವರು ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಅವರ ಶಿಕ್ಷಣದಲ್ಲಿನ ಅಡೆತಡೆಗಳನ್ನು ನಿವಾರಿಸಲು ಗಮನಹರಿಸಿದ್ದಾರೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರ ತೀರ್ಪಿನಲ್ಲಿ ಈ ಅಂಶ ಕಾಣೆಯಾಗಿದ್ದರೂ ಈ ಅಂಶವನ್ನು ಅವರು ಸ್ವಾಗತಿಸಬೇಕು. ಈ ತೀರ್ಪಿನಲ್ಲಿ ನ್ಯಾಯಾಧೀಶರ ಮಧ್ಯ ಭಿನ್ನಾಭಿಪ್ರಾಯಗಳಿವೆ. ಹಿಜಾಬ್‌ಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯಲು ಕರ್ನಾಟಕ ಸರ್ಕಾರವನ್ನು ಕೋರಲಾಗಿದೆ. ಕರ್ನಾಟಕ ಸರ್ಕಾರ ಈ ಆದೇಶವನ್ನು ಹಿಂಪಡೆದರೆ ಇಡೀ ವಿವಾದ ತಾನಾಗಿಯೇ ಅಂತ್ಯವಾಗಲಿದೆ ಎಂದು ರಹಮಾನಿ ಹೇಳಿದರು.
ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಅಂಗಳಕ್ಕೆ ಹಿಜಾಬ್ ವಿವಾದ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಬೇಕೇ ಅಥವಾ ಬೇಡವೇ? ಈಗ ಅದನ್ನು ಸುಪ್ರೀಂ ಕೋರ್ಟ್‌ನ ದೊಡ್ಡ ಪೀಠವು ನಿರ್ಧರಿಸುತ್ತದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ಇದೀಗ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯ ಭಿನ್ನವಾಗಿತ್ತು. ಹೀಗಾಗಿ ಪ್ರಕರಣ ಇದೀಗ ವಿಸ್ತೃತ ಪೀಠದ ಮೆಟ್ಟಿಲೇರಿದೆ.
ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಭಾಗವಲ್ಲ ಎಂದು ನ್ಯಾಯಾಲಯ ಹೇಳಿದೆ. ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ವಜಾಗೊಳಿಸಿತ್ತು.