ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ, ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ಜಾಗಿಂಗ್ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದು ಪರಿಣಾಮ ಟೆಕ್ (ತಂತ್ರಜ್ಞಾನ) ಕಂಪನಿಯೊಂದರ ಮಹಿಳಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು (ಸಿಇಒ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಲ್ಲಿನ ವರ್ಲಿ ಸೀ ಫೇಸ್‌ನಲ್ಲಿರುವ ವರ್ಲಿ ಡೈರಿ ಪ್ರದೇಶದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ಜರುಗಿದೆ. ಮೃತ ಮಹಿಳೆಯನ್ನು ಮುಂಬೈನ ದಾದರ್ ಮಾಟುಂಗಾ ನಿವಾಸಿ, 42 ವರ್ಷದ ರಾಜಲಕ್ಷ್ಮೀ ರಾಜಕೃಷ್ಣನ್ ಎಂದು ಗುರುತಿಸಲಾಗಿದೆ. ರಾಜಲಕ್ಷ್ಮೀ ತಂತ್ರಜ್ಞಾನ ಕಂಪನಿಯೊಂದರ ಸಿಇಒ ಆಗಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ಆರೋಪಿ ಚಾಲಕ ಸುಮೇರ್ ಮರ್ಚೆಂಟ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಹೇಗಾಯಿತು ಅಪಘಾತ?: ಭಾನುವಾರ ಬೆಳಗ್ಗೆ ವರ್ಲಿ ಸೀ ಫೇಸ್‌ನಲ್ಲಿ ರಾಜಲಕ್ಷ್ಮೀ ರಾಜಕೃಷ್ಣನ್ ಜಾಗಿಂಗ್ ಮಾಡುತ್ತಿದ್ದರು. ರಾಜಲಕ್ಷ್ಮೀ ಫಿಟ್ನೆಸ್ ಫ್ರೀಕ್ ಹಾಗೂ ಜಾಗರ್ ಆಗಿದ್ದರು. ಶಿವಾಜಿ ಪಾರ್ಕ್‌ನ ಜಾಗರ್ ಗ್ರೂಪ್‌ನಲ್ಲಿ ಪ್ರತಿನಿತ್ಯ ಜಾಗಿಂಗ್ ಮಾಡುತ್ತಿದ್ದರು. ಇವತ್ತು ಕೂಡ ಎಂದಿನಂತೆ ರಾಜಲಕ್ಷ್ಮೀ ಗ್ರೂಪ್ ಜೊತೆಯಲ್ಲಿ ಜಾಗಿಂಗ್ಗೆ ಬಂದಿದ್ದರು. ಆದರೆ, ವರ್ಲಿ ಡೈರಿ ಪ್ರದೇಶದಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ರಾಜಲಕ್ಷ್ಮೀ ಜಾಗಿಂಗ್ ಮಾಡಿಕೊಂಡು ಮುಂದೆ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಹಿಂಬದಿಯಿಂದ ಗುದ್ದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ರಾಜಲಕ್ಷ್ಮೀ ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದ್ದಾರೆ ಎಂದು ತಿಳಿದು ಬಂದಿದೆ. ನೋಡ ನೋಡುತ್ತಿದ್ದಂತೆ ನಡೆದ ಈ ಘಟನೆಯಿಂದ ಇತರ ಜಾಗರ್ಗಳು ಆಘಾತಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಗಾಯಾಳು ರಾಜಲಕ್ಷ್ಮೀ ಅವರನ್ನು ಸಮೀಪದ ಪೊದ್ದಾರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ಎಂದು ವೈದ್ಯರು ಘೋಷಿಸಿದ್ದಾರೆ.